ಮಂಗಳೂರು: ದ.ಕ ಜಿಲ್ಲೆಯ ಲೇಡಿಗೋಶನ್ ಹಾಗೂ ವೆನ್ಲಾಕ್ ಆಸ್ಪತ್ರೆಯಲ್ಲಿ ಕರ್ತವ್ಯಕ್ಕಾಗಿ ನಿಯೋಜಿಸಿದ್ದ ಐವರು ವೈದ್ಯರಿಗೆ ಕರೊನಾ ಸೋಂಕು ತಗುಲಿದೆ. ಎಲ್ಲರೂ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು. 28 ವರ್ಷ ಯುವಕ, 28 ವರ್ಷದ ಇಬ್ಬರು ಯುವತಿಯರು, 27 ವರ್ಷದ ಇಬ್ಬರು ಯುವತಿಯರು ಸೋಂಕಿಗೊಳಗಾದ ವೈದ್ಯರು. ಇವರನ್ನು ವೆನ್ಲಾಕ್‌ಗೆ ವರ್ಗಾಯಿಸಲಾಗಿದೆ.
ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ, ಒಬ್ಬರು ಕೆಎಂಸಿ ಆಸ್ಪತ್ರೆಯಲ್ಲಿ, ಮೂವರು ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ವಾಸಮಾಡುತ್ತಿದ್ದ ನಗರದ ಅತ್ತಾವರದ ಅಪಾರ್ಟ್‌ಮೆಂಟನ್ನು ಸೀಲ್‌ಡೌನ್ ಮಾಡಲಾಗಿದೆ. ಇವರೊಂದಿಗೆ ಸಂಪರ್ಕವಿರುವ 15 ವೈದ್ಯರು, ವೈದ್ಯಕೀಯ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಸ್ಥಿತಿಯೂ ತೃಪ್ತಿಕರ ಎಂದು ಡಿಎಚ್‌ಒ ತಿಳಿಸಿದ್ದಾರೆ.
ದ.ಕ.ಜಿಲ್ಲೆಯಲ್ಲಿ 28ಮಂದಿಗೆ ಕರೊನಾ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ 28 ಮಂದಿಗೆ ಕರೊನಾ ಸೋಂಕು ತಗಲಿದೆ. ಸೌದಿ ಅರೇಬಿಯಾ, ಶಾರ್ಜಾ, ಮಸ್ಕತ್ ಮತ್ತು ಕತಾರ್‌ನಿಂದ ಜೂನ್ 17, 19, 21ರಂದು ಆಗಮಿಸಿ ಕ್ವಾರಂಟೈನ್ ಆಗಿದ್ದವರಲ್ಲಿ 1 ವರ್ಷದ ಮಗು ಸೇರಿದಂತೆ 19 ಮಂದಿಗೆ ಕರೊನಾ ದೃಢಪಟ್ಟಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನಿಂದ 21ರಂದು ಆಗಮಿಸಿದ್ದ 24 ವರ್ಷದ ಯುವಕನಿಗೆ ಕರೊನಾ ದೃಢಪಟ್ಟಿದ್ದು, ಮಂಗಳೂರು ನಿವಾಸಿ 35ರ ಗಂಡಸಿಗೆ ಇನ್‌ಫ್ಲುಯೆಂಜಾ ಮಾದರಿ ಲಕ್ಷಣಗಳೊಂದಿಗೆ ಕರೊನಾ ಪಾಸಿಟಿವ್ ಆಗಿದೆ. ಒಂದು ಪ್ರಕರಣದಲ್ಲಿ ಸಂಪರ್ಕ ಪತ್ತೆ ಮಾಡಲಾಗುತ್ತಿದೆ. ಗುರುವಾರ 259 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ, 296 ಸ್ಯಾಂಪಲ್ ಕಳುಹಿಸಲಾಗಿದೆ. ಚಿಕಿತ್ಸೆ ಬಳಿಕ ಕರೊನಾ ಮುಕ್ತರಾದ 43 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.
14 ಮಂದಿಯ ವರದಿ ಪಾಸಿಟಿವ್
ಉಡುಪಿ: ಜಿಲ್ಲೆಯಲ್ಲಿ ಗುರುವಾರ 7 ಮಹಿಳೆಯರೂ, 4 ಪುರುಷರು, 3 ಮಕ್ಕಳು ಸಹಿತ 14 ಮಂದಿಗೆ ಕರೊನಾ ಪಾಸಿಟಿವ್ ವರದಿ ಬಂದಿದೆ. 103 ಮಂದಿಗೆ ವರದಿ ನೆಗಟಿವ್ ಬಂದಿದೆ. 388 ಮಂದಿಯ ವರದಿ ನಿರೀಕ್ಷಿಸಲಾಗುತ್ತಿದೆ. ಪಾಸಿಟಿವ್ ಬಂದವರಲ್ಲಿ 10 ಮಂದಿ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದವರು. ಪಡುಬಿದ್ರಿಯ ಇಬ್ಬರು ಸಹೋದರರು, ಉಪ್ಪುಂದದ 40 ವರ್ಷದ ಮಹಿಳೆ ಹಾಗೂ 34 ವರ್ಷದ ಪುರುಷನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 33 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ 94 ಸಕ್ರಿಯ ಪ್ರಕರಣಗಳಿವೆ. 107 ಮಂದಿಯ ಮಾದರಿ ಸಂಗ್ರಹಿಸಲಾಗಿದ್ದು, 11 ಮಂದಿ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ.
ಕಾಸರಗೋಡಿನ ನಾಲ್ವರಲ್ಲಿ ದೃಢ
ಕಾಸರಗೋಡು: ಜಿಲ್ಲೆಯ ನಾಲ್ವರು ಒಳಗೊಂಡಂತೆ ಕೇರಳದಲ್ಲಿ ಗುರುವಾರ 123 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 84 ಮಂದಿ ವಿದೇಶದಿಂದ, 33 ಮಂದಿ ಇತರ ರಾಜ್ಯಗಳಿಂದ ಆಗಮಿಸಿದ್ದರೆ, ಆರು ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.