ಜಿಲ್ಲೆ

ದ.ಕ.ದಲ್ಲಿ ಕೋವಿಡ್ ಸಂಖ್ಯೆ ಇಳಿಕೆ

Dakshina Kannada

ಮಂಗಳೂರು: ವಾರದ ಬಳಿಕ ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣದಲ್ಲಿ ಇಳಿಕೆ ಕಂಡುಬಂದಿದೆ.

ಸೋಮವಾರದ ವರದಿಯಂತೆ 119 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ, ಕಳೆದ ನಾಲ್ಕು ದಿನಗಳಲ್ಲಿ ಘಟಿಸಿದ ಸಾವುಗಳಲ್ಲಿ 8 ಪ್ರಕರಣಗಳಲ್ಲಿ ಕರೊನಾ ದೃಢಪಟ್ಟಿದೆ.

ಪ್ರಾಥಮಿಕ ಸಂಪರ್ಕದಿಂದ 46 ಮಂದಿ, ಐಎಲ್‌ಐ ಹೊಂದಿರುವ 34 ಮಂದಿ, ತೀವ್ರ ಉಸಿರಾಟದ ತೊಂದರೆ ಇದ್ದ 6 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದ್ದು 33 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ.

ಹುಬ್ಬಳ್ಳಿ ಮೂಲದ 68 ವರ್ಷದ ಗಂಡಸು ಜು.23ರಂದು ರಿಫ್ರಾಕ್ಟರಿ ಹೈಪೋಕ್ಸೇಮಿಯಾ ತೊಂದರೆಯೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತಪಟ್ಟಿದ್ದರು. ಮಂಗಳೂರು ನಿವಾಸಿ 64 ವರ್ಷದ ಗಂಡಸು 20ರಂದು ಹೈಪೋಕ್ಸೇಮಿಯಾ, ಅಸ್ತಮಾ, ಡಯಾಬಿಟಿಸ್ ಇತ್ಯಾದಿಯೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ 25ರಂದು ಮೃತಪಟ್ಟಿದ್ದರು. 65 ವರ್ಷದ ಬಂಟ್ವಾಳ ಮೂಲದ ಗಂಡಸು 22ರಂದು ವೆನ್ಲಾಕ್ ಆಸ್ಪತ್ರೆಗೆ ಅಧಿಕ ಬಿಪಿ, ನ್ಯುಮೋನಿಯಾದೊಂದಿಗೆ ದಾಖಲಾಗಿದ್ದು 26ರಂದು ಮೃತಪಟ್ಟಿದ್ದರು.

ಉಡುಪಿಯ 82 ವರ್ಷದ ವೃದ್ಧರು 25ರಂದು ನ್ಯುಮೋನಿಯಾ, ಉಸಿರಾಟದ ತೊಂದರೆ, ಹೃದಯ ಕಾಯಿಲೆ ಹಾಗೂ ಇತರ ಆರೋಗ್ಯ ಸಮಸ್ಯೆಗಳೊಂದಿಗೆ ದಾಖಲಾಗಿದ್ದು 26ರಂದು ಮೃತಪಟ್ಟಿದ್ದರು. 65 ವರ್ಷದ ಮಂಗಳೂರು ನಿವಾಸಿ ಗಂಡಸು ಜುಲೈ 19ರಂದು ಆಸ್ಪತ್ರೆಗೆ ಕಿಡ್ನಿ ಸಮಸ್ಯೆ, ಸೆಪ್ಟಿಕ್ ಶಾಕ್, ಹೈಪರ್‌ಟೆನ್ಶನ್ ಇತ್ಯಾದಿಯೊಂದಿಗೆ ದಾಖಲಾಗಿದ್ದು 26ರಂದು ಮೃತರಾಗಿದ್ದರು.

ಮಂಗಳೂರು ನಿವಾಸಿ 65 ವರ್ಷದ ಮಹಿಳೆ 22ರಂದು ಖಾಸಗಿ ಆಸ್ಪತ್ರೆಗೆ ಹೈಪೋಕ್ಸೇಮಿಯಾ, ಸೆಪ್ಟಿಕ್ ಶಾಕ್, ಬ್ಯಾಕ್ಟಿರಿಯಾ ಸೋಂಕು, ಕಿಡ್ನಿ ಫೈಲ್ಯೂರ್ ಇತ್ಯಾದಿ ಸಮಸ್ಯೆಗಳೊಂದಿಗೆ ದಾಖಲಾಗಿ ಸೋಮವಾರ ಮರಣಹೊಂದಿದರು. ಮಂಗಳೂರು ನಿವಾಸಿ 51 ವರ್ಷದ ಗಂಡಸು 26ರಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ನ್ಯುಮೋನಿಯಾದಿಂದ ಬಳಲುತ್ತಿದ್ದು ಸೋಮವಾರ ನಿಧನರಾದರು. ಮಂಗಳೂರು ನಿವಾಸಿ 92 ವರ್ಷದ ವೃದ್ಧೆ ಬಿಪಿ, ಡಯಾಬಿಟಿಸ್ ಹಾಗೂ ನ್ಯುಮೋನಿಯಾದೊಂದಿಗೆ ದಾಖಲಾಗಿದ್ದು ಭಾನುವಾರ ಮೃತಪಟ್ಟಿದ್ದರು. ಇವರೆಲ್ಲರಿಗೂ ಕೋವಿಡ್ ದೃಢಪಟ್ಟಿದೆ.

ಜಿಲ್ಲೆಯಲ್ಲಿ ಕೋವಿಡ್ ಒಟ್ಟು ಪ್ರಕರಣಗಳ ಸಂಖ್ಯೆ 4930 ತಲಪಿದೆ. ಕೋವಿಡ್‌ನಿಂದ ಮೃತರಾದವರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. ಸೋಮವಾರ 90 ಮಂದಿ ಕರೊನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಬಿಡುಗಡೆಯಾದವರು 2297 ಮಂದಿ. ಸದ್ಯ 2502 ಸಕ್ರಿಯ ಪ್ರಕರಣಗಳಿವೆ.

ಕಾಸರಗೋಡಿನ 38 ಮಂದಿಗೆ ಪಾಸಿಟಿವ್

ಕಾಸರಗೋಡು: ಜಿಲ್ಲೆಯ 38 ಮಂದಿ ಒಳಗೊಂಡಂತೆ ರಾಜ್ಯದಲ್ಲಿ 702 ಮಂದಿಯಲ್ಲಿ ಸೋಮವಾರ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಇವರಲ್ಲಿ 483 ಮಂದಿಗೆ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ. ಇನ್ನು 35 ಮಂದಿಯ ರೋಗ ಮೂಲಕ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಚಿಕಿತ್ಸೆಯಲ್ಲಿದ್ದವರಲ್ಲಿ ಕಾಸರಗೋಡಿನ 53 ಮಂದಿ ಒಳಗೊಂಡಂತೆ ಕೇರಳದಲ್ಲಿ 745 ಮಂದಿ ಗುಣವಾಗಿದ್ದಾರೆ.