ಜಿಲ್ಲೆ

ಕರೊನಾ, ಹಕ್ಕಿಜ್ವರ ಭೀತಿ ಕೋಳಿಗಳ ಮಾರಣಹೋಮ

ಮೈಸೂರು/ಬೆಳಗಾವಿ/ಕೋಲಾರ: ಕರೊನಾ ವೈರಸ್ ರಾಜ್ಯದ ಕುಕ್ಕುಟೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಜತೆಗೆ ಕೇರಳದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರವು ಕೋಳಿ ಸಾಕಣೆ ದಾರರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಕರೊನಾ, ಹಕ್ಕಿಜ್ವರ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೋಳಿ ಮಾಂಸ ಸೇವನೆಗೆ ಮುಂದಾಗುತ್ತಿಲ್ಲ. ಹೀಗಾಗಿ ಕೆಲ ದಿನಗಳಿಂದ ಕೋಳಿಮಾಂಸ ದರ ತೀವ್ರ ಕುಸಿತ ಕಂಡಿದೆ.

ಮೈಸೂರಲ್ಲಿ ಹಕ್ಕಿಜ್ವರ ಭೀತಿ: ಮೈಸೂರು ನಗರದಲ್ಲೂ ಹಕ್ಕಿಗಳು ಪ್ರತಿನಿತ್ಯ ಸಾವಿಗೀಡಾಗುತ್ತಿರುವುದು ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸುತ್ತಿದೆ. ವಿದ್ಯಾರಣ್ಯಪುರಂ ಸುತ್ತಮುತ್ತ 15ಕ್ಕೂ ಹೆಚ್ಚು ಕೊಕ್ಕರೆಗಳು ಈವರೆಗೆ ಮೃತಪಟ್ಟಿವೆ. ಹೆಬ್ಬಾಳ ಕೆರೆಯಲ್ಲಿ 50ಕ್ಕೂ ಹೆಚ್ಚು ಕೊಕ್ಕರೆ ಮೃತಪಟ್ಟಿವೆ. ಇವೆಲ್ಲವೂ ವಲಸೆ ಬಂದ ಹಕ್ಕಿಗಳಾಗಿವೆ. ಆದರೆ, ಸ್ಥಳೀಯ ಹಕ್ಕಿಗಳು ಯಾವುದೂ ಮೃತಪಟ್ಟಿಲ್ಲ. ಈ ಕೊಕ್ಕರೆಗಳು ಹಕ್ಕಿಜ್ವರದಿಂದ ಮೃತಪಟ್ಟಿವೆಯೇ ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ಮೃತಪಟ್ಟಿವೆಯೇ ಎಂಬುದು ವೈದ್ಯಕೀಯ ಪರೀಕ್ಷೆಯಿಂದಷ್ಟೇ ದೃಢಪಡಬೇಕಾಗಿದೆ. ಇನ್ನು ಮೇಟಗಳ್ಳಿಯಲ್ಲಿ 12 ಕೋಳಿಗಳು ಮೃತಪಟ್ಟಿವೆ. ಆದರೆ, ಇವುಗಳ ಸಾವಿಗೆ ನಿಖರ ಕಾರಣ ತಿಳಿದಿಲ್ಲ.

ಕೋಳಿ ಜೀವಂತ ಸಮಾಧಿ!: ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದರ ಕುಸಿತದಿಂದ ಕಂಗೆಟ್ಟ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಲೋಳಸೂರ ಗ್ರಾಮದ ನಜೀರ್ ಅಹಮ್ಮದ್ ಮಕಾಂದಾರ್ ಎಂಬುವರು 5 ಸಾವಿರಕ್ಕೂ ಅಧಿಕ ಕೋಳಿ ಗಳನ್ನು ಜೀವಂತ ಹೂತು ಹಾಕಿದ್ದಾರೆ. ಪ್ರತಿ ಕೋಳಿಗೆ ಮಾರುಕಟ್ಟೆ ತಲುಪುವವರೆಗೆ ಏನಿಲ್ಲವೆಂದರೂ 50 ರೂ. ಬಂಡವಾಳ ಹೂಡಬೇಕು. ಆದರೆ ಡೀಲರ್ಸ್ ಸಾಕಣೆದಾರರಿಂದ ಕೆ.ಜಿ.ಗೆ ಕೇವಲ 8 ರಿಂದ 15 ರೂ.ಗೆ ಕೇಳುತ್ತಿದ್ದಾರೆ. ಇದರಿಂದ ಸಾಕಣೆ ವೆಚ್ಚವೂ ದಕ್ಕುವುದಿಲ್ಲ. ಹಾಗಾಗಿ ಕೋಳಿಗಳ ಸಹವಾಸವೇ ಬೇಡ ಎಂದು ಕೆಲ ಫಾಮ್ರ್ ಮಾಲೀಕರು ಜೀವಂತ ಕೋಳಿಗಳನ್ನೇ ಮಣ್ಣು ಮಾಡುತ್ತಿದ್ದಾರೆ.

10 ಸಾವಿರ ಕೋಳಿಮರಿ ಸಮಾಧಿ

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಮಾಗೊಂದಿ ಗ್ರಾಮದ ಕೋಳಿ ಸಾಕಣಿದಾರ ಸತ್ಯ ಎಂಬುವರು 9 ದಿನಗಳ 10 ಸಾವಿರ ಮರಿಗಳನ್ನು ಮಂಗಳವಾರ ಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿ ಜೀವಂತ ಸಮಾಧಿ ಮಾಡಿದ್ದಾರೆ. ಕೋಳಿಗಳು ಮಾರಾಟವಾಗದೆ ಫಾರಂಗಳಲ್ಲಿಯೇ ಉಳಿಯುತ್ತಿವೆ. ಹೀಗಾಗಿ ಈಗಲೇ ಮರಿಗಳನ್ನು ಸಾಯಿಸಿದರೆ ಲಕ್ಷಾಂತರ ರೂ. ನಷ್ಟ ತಪ್ಪಿಸಬಹುದು ಎನ್ನುವ ಆಲೋಚನೆಯಿಂದ ಮರಿಗಳನ್ನು ಸಾಮೂಹಿಕವಾಗಿ ಮಣ್ಣುಪಾಲು ಮಾಡಿದ್ದಾರೆ.

ಕೋಳಿ ಮಾಂಸ ಸೇವನೆಯಿಂದ ಕರೊನಾ ಸೋಂಕು ಬರುತ್ತದೆ ಎನ್ನುವುದು ಸುಳ್ಳು ವದಂತಿ. ಸಾಮಾಜಿಕ ಜಾಲತಾಣಗಳಲ್ಲಿ ತಪು್ಪ ಸಂದೇಶ ರವಾನಿಸುತ್ತಿರುವುದರಿಂದ ಕೋಳಿ ಮಾರಾಟಕ್ಕೆ ಹಿನ್ನಡೆಯಾಗಿ ಕುಕ್ಕುಟ ಉದ್ಯಮಕ್ಕೆ ನಷ್ಟವಾಗುತ್ತಿದೆ. | ಡಾ. ಎ.ಕೆ. ಚಂದ್ರಶೇಖರ ಜಿಲ್ಲಾ ಜಂಟಿ ನಿರ್ದೇಶಕ, ಪಶುಪಾಲನೆ ಇಲಾಖೆ, ಬೆಳಗಾವಿ