ತುಮಕೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಕರೊನಾ ಕಾರ್ಮೋಡ ಆವರಿಸಿದೆ. 2019-20ನೇ ಸಾಲಿನಲ್ಲಿ 54 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿದ್ದು ಆರ್ಥಿಕ ವರ್ಷದ ಆರಂಭದಲ್ಲೇ ಅನುಷ್ಠಾನಕ್ಕೆ ಕರೊನಾ ಅಪ್ಪಳಿಸಿದೆ.
ಜಿಪಂ ವತಿಯಿಂದ 3.87 ಲಕ್ಷ ಕುಟುಂಬಗಳು ಉದ್ಯೋಗ ಖಾತ್ರಿ ಚೀಟಿ ಹೊಂದಿದ್ದು, ಇವರ ಮೂಲಕ 54 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಿ 24673 ಸಂಖ್ಯೆಯ ಆಸ್ತಿಗಳನ್ನು ಸೃಜಿಸಲಾಗಿತ್ತು. ಆರ್ಥಿಕ ವರ್ಷದ ಅಂತ್ಯಕ್ಕೆ ಕರೊನಾ ಮಹಾಮಾರಿ 2020-21ನೇ ಸಾಲಿನ ಉದ್ಯೋಗ ಖಾತ್ರಿ ಆರಂಭಿಕ ಆಘಾತ ನೀಡಿದೆ.
ನರೇಗಾಕ್ಕೆ 286 ಕೋಟಿ ರೂ.: 2019-20ನೇ ಸಾಲಿನಲ್ಲಿ 54 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, ಕೂಲಿ ಹಣ ಬಾಬ್ತು 14610.53 ಲಕ್ಷ ರೂ., ಹಾಗೂ ಸಾಮಗ್ರಿ ಮೊತ್ತ 13990.07 ಲಕ್ಷ ರೂ., ಸೇರಿ ಒಟ್ಟು ರೂ. 28600.60 ಲಕ್ಷ ರೂ.,ಗಳನ್ನು ಈ ಯೋಜನೆಗೆ ವೆಚ್ಚ ಮಾಡಲಾಗಿದೆ. ಸರ್ಕಾರದಿಂದ ಬರಬೇಕಿರುವ 2018-19 ಹಾಗೂ 2019-20ನೇ ಸಾಲಿನಲ್ಲಿ 2 ಕೋಟಿ ರೂ.ಕೂಲಿ ಹಣ ಹಾಗೂ 60 ಕೋಟಿ ರೂ., ಸಾಮಗ್ರಿ ಮೊತ್ತಕ್ಕಾಗಿ ನರೇಗಾದಡಿ ಬೆವರು ಹರಿಸಿರುವವರು ಕಾಯುವಂತಾಗಿದೆ.
ನರೇಗಾಕ್ಕೆ ಚಾಲನೆ ಕೊಡಿ : ಉದ್ಯೋಗವಿಲ್ಲದೆ ಮನೆಯಲ್ಲಿ ಉಳಿದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಕುಟುಂಬಗಳಿಗೆ ನರೇಗಾದಡಿ ಉದ್ಯೋಗ ಒದಗಿಸುವ ದೃಷ್ಟಿಯಿಂದ ರೈತರ ಹೊಲಗಳಲ್ಲಿ ಕೃಷಿ ಹೊಂಡ, ಬದು ನಿರ್ಮಾಣ ಮುಂತಾದ ಕಾಮಗಾರಿ ಕೈಗೊಳ್ಳಲು ಹಾಗೂ ತಮ್ಮ ಸ್ವಂತ ಜಮೀನಿನಲ್ಲಿ ಗಿಡ ನೆಡಲು ಗುಂಡಿ ತೋಡುವ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಲು ಸೂಚಿಸಲಾಗಿದೆ. ಗ್ರಾಮದ ಪರಿಮಿತಿಯಲ್ಲಿರುವ ಸರ್ಕಾರಿ ಜಮೀನು, ಶಾಲೆ, ಗ್ರಾಪಂ ಆವರಣದ ಜಾಗದಲ್ಲಿ ಹಾಗೂ ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಡುವ ಸಲುವಾಗಿ ಗುಂಡಿಗಳನ್ನು ತೆಗೆದು ಸಿದ್ಧಮಾಡಿಟ್ಟುಕೊಳ್ಳಲು ಗ್ರಾಪಂಗಳಿಗೆ ನಿರ್ದೇಶನ ನೀಡಲಾಗಿದೆ.
ಸರ್ಕಾರದ ನಿರ್ದೇಶನ: ಕರೊನಾ ಅಪಾಯ ಇರುವುದರಿಂದ ವೈಯಕ್ತಿಕ ಕಾಮಗಾರಿಗಳನ್ನು ಆರಂಭಿಸುವಂತೆ ಸರ್ಕಾರ ಸೂಚನೆ ನೀಡಿದೆ. ಅಂಗನವಾಡಿ ಕಟ್ಟಡ, ಗ್ರಾಪಂ ಕಟ್ಟಡ, ಶೈತ್ಯಾಗಾರ ನಿರ್ಮಾಣ ಕಾಮಗಾರಿಗಳಂತೆ ಸಾಮೂಹಿಕ ಕಾಮಗಾರಿಗಳಲ್ಲಿ 5 ಜನರಿಗಿಂತ ಹೆಚ್ಚು ಜನ ಒಂದು ಕಡೆ ಸೇರದಂತೆ ಹಾಗೂ ಕೆಲಸ ಮಾಡುವ ಸಂದರ್ಭದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಕನಿಷ್ಠ ಮೂರು ಅಡಿ (ಸಾಮಾಜಿಕ ಅಂತರ) ಅಂತರ ಕಾಯ್ದುಕೊಳ್ಳುವಂತೆ ಸಹ ಕಡ್ಡಾಯ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಕೂಲಿಕಾರರನ್ನು ಒಂದೇ ವಾಹನದಲ್ಲಿ ತುಂಬಿಕೊಂಡು ಹೋಗದಂತೆಯೂ ಎಚ್ಚರಿಸಲಾಗಿದೆ.
ಘಟನೋತ್ತರ ಅನುಮೋದನೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈತರು ಹಾಗೂ ಕೂಲಿಕಾರರಿಗೆ ಕೂಲಿ ಕೆಲಸ ಸಿಗದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮೀಣ ಕೂಲಿಕಾರರಿಗೆ ತಕ್ಷಣ ಉದ್ಯೋಗ ಒದಗಿಸುವ ಉದ್ದೇಶದಿಂದ ಗ್ರಾಪಂಗಳ ಕ್ರಿಯಾಯೋಜನೆಯಲ್ಲಿ ಸೇರ್ಪಡೆಗೊಳ್ಳದಿದ್ದರೂ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಿ ಘಟನೋತ್ತರವಾಗಿ ಅನುಮೋದನೆ ಪಡೆಯುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
86 ಲಕ್ಷ ಮಾನವ ದಿನ ಸೃಜನೆ : 2020-21ನೇ ಸಾಲಿನಲ್ಲಿ 86 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಈ ಬಾರಿ ಕೂಲಿ ಹಣವನ್ನು 249 ರೂ.,ಗಳಿಂದ 275 ರೂ.,ಗಳಿಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಕರೊನಾ ಹಿನ್ನೆಲೆಯಲ್ಲಿ ಯೋಜನೆಗೆ ಕುಂದು ಬರದಂತೆ ಅನುದಾನ ಬಿಡುಗಡೆಗೆ ಕ್ರಮವಹಿಸಿದೆ. ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನರೇಗಾ ಅಡಿ ಗ್ರಾಮೀಣ ಭಾಗದಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳು, ಕೃಷಿಹೊಂಡ, ರೈತರ ಹೊಲದಲ್ಲಿ ಬದು ನಿರ್ಮಾಣ, ಮನೆ ನಿರ್ಮಾಣ, ರೈತರ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.