ಜಿಲ್ಲೆ

ಕೋವಿಡ್ ಸಂಶಯಗಳಿಗೆ ಕಿವಿಯಾಗುವ ಆಪ್ತಮಿತ್ರ

Dakshina Kannada

ವೇಣುವಿನೋದ್ ಕೆ.ಎಸ್.ಮಂಗಳೂರು

ಕೋವಿಡ್ ಕುರಿತು ಜನರ ದೂರು ದುಮ್ಮಾನಗಳಿಗೆ ಸಂಶಯಗಳಿಗೆ ಕಿವಿಯಾಗುವ ಆಪ್ತಮಿತ್ರ ಕೇಂದ್ರವೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇಲ್ಲಿನ ಇನ್ಫೋಸಿಸ್ ಕೇಂದ್ರದ ಕ್ಯಾಂಪಸ್‌ನಲ್ಲಿ ಈ ಟೆಲಿಮೆಡಿಸಿನ್ ಕೇಂದ್ರವಿದ್ದು, 70ರಷ್ಟು ಸ್ವಯಂಸೇವಕರು ದಿನದ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿ ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ವೈದ್ಯರು.

ಕೋವಿಡ್ ಸಲಹೆ, ಮಾರ್ಗದರ್ಶನ ಪಡೆಯಲು ಉಚಿತ ಸಹಾಯವಾಣಿ 14410ಯನ್ನು ಏಪ್ರಿಲ್‌ನಲ್ಲಿ ಆರಂಭಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದರು. ಬೆಂಗಳೂರಿನಲ್ಲಿ 4, ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಮತ್ತು ಮಂಗಳೂರಿನಲ್ಲಿ ತಲಾ 1 ಸಹಿತ ರಾಜ್ಯದಲ್ಲಿ 6 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ದ.ಕ. ಜಿಲ್ಲೆಯಲ್ಲಿರುವ ಸಹಾಯವಾಣಿ ಜಿಲ್ಲೆಗಷ್ಟೇ ಸೀಮಿತವಲ್ಲ. ರಾಜ್ಯದೆಲ್ಲೆಡೆಯಿಂದ ಇಲ್ಲಿಗೆ ಕರೆಗಳು ಬರುತ್ತವೆ, ಕಳೆದೊಂದು ತಿಂಗಳಿನಿಂದ ಕರೆಗಳ ಸಂಖ್ಯೆ ಹೆಚ್ಚಿದ್ದು, ದಟ್ಟಣೆ ಅನುಸರಿಸಿಕೊಂಡು ಕರೆಗಳನ್ನು ಇತರ ಕೇಂದ್ರಗಳಿಗೂ ರವಾನಿಸುವ ವ್ಯವಸ್ಥೆ ಇದೆ.

ಪ್ರಾರಂಭದಲ್ಲಿ ಕರೆ ಮಾಡುವವರು ಬೇರೆ ಊರುಗಳಿಗೆ ಹೋಗುವ ಬಗ್ಗೆ, ಕಾರ್ಮಿಕರು ತಮ್ಮ ಊರಿಗೆ ಮರಳುವ ಬಗ್ಗೆ ಇತ್ಯಾದಿ ಸಂದೇಹಗಳನ್ನೇ ಕೇಳುತ್ತಿದ್ದರು. ಆದರೆ ಈಗ ಕೋವಿಡ್ ಬಗ್ಗೆ, ಲಕ್ಷಣ, ಚಿಕಿತ್ಸೆ ಇತ್ಯಾದಿ ಬಗ್ಗೆ ಸಂಶಯ ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ.

ವ್ಯವಸ್ಥೆ ಹೇಗೆ?: ಕರೆಗಳನ್ನು ಸ್ವೀಕರಿಸುವ ಸ್ವಯಂಸೇವಕರು ಪ್ರಾಥಮಿಕ ಮಾಹಿತಿ ಪಡೆದು ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದರೆ ವೈದ್ಯರಿಗೆ ಕರೆಗಳನ್ನು ವರ್ಗಾಯಿಸುತ್ತಾರೆ. ರೋಗ ಲಕ್ಷಣಗಳನ್ನು ಕೇಳಿ ತಿಳಿಯುವ ವೈದ್ಯರು ಕರೆ ಮಾಡಿದವರಿಗೆ ಹತ್ತಿರದ ಆಸ್ಪತ್ರೆ ಯಾವುದು? ಏನು ಮಾಡಬೇಕು ಎಂಬಿತ್ಯಾದಿ ಸಲಹೆಗಳನ್ನು ನೀಡುತ್ತಾರೆ.

14410 ಸಹಾಯವಾಣಿಯ ಉದ್ದೇಶ ಕೋವಿಡ್-19 ಲಕ್ಷಣ ಇರುವ ವ್ಯಕ್ತಿಗಳಿಗೆ ಸಹಾಯವಾಣಿ ಮೂಲಕ ಸಲಹೆ ಹಾಗೂ ಮಾರ್ಗದರ್ಶನ ನೀಡಿ ಅವರಿಗೆ ಸೂಕ್ತ ಚಿಕಿತ್ಸೆಗೆ ನೆರವಾಗುವುದು ಮುಖ್ಯ ಉದ್ದೇಶ. ಕೋವಿಡ್ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ತಪ್ಪಿಸುವ ಮೂಲಕ ರೋಗ ಹರಡುವ ಸಾಧ್ಯತೆಗಳನ್ನು ಕೂಡ ಕಡಿಮೆ ಮಾಡಬಹುದು.

ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಹಾಗೂ 2ರಿಂದ ರಾತ್ರಿ 8ರ ವರೆಗೆ ದಿನದಲ್ಲಿ ಎರಡು ಪಾಳಿಗಳಲ್ಲಿ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಾರೆ. ಸರಾಸರಿ 600 ಕರೆಗಳು ಪ್ರತಿದಿನ ಬರುತ್ತಿವೆ. ಸ್ವಯಂಸೇವಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. - ದಿನೇಶ್, ಆಪ್ತಮಿತ್ರ ಟೆಲಿಮೆಡಿಸಿನ್ ಕೇಂದ್ರದ ಉಸ್ತುವಾರಿ