ಶಿರಾ: ಆಂಧ್ರಪ್ರದೇಶದ ಹಿಂದೂಪುರಕ್ಕೆ ಭೇಟಿ ನೀಡಿ ನಗರಕ್ಕೆ ವಾಪಸಾಗಿದ್ದ ಪಾತ್ರೆ ವ್ಯಾಪಾರಿಯಿಂದ ‘ಕರೊನಾ ಸೋಂಕು’ 7 ಜನಕ್ಕೆ ಹಬ್ಬಿರುವುದು ನಗರದಲ್ಲಿ ಸಹಜವಾಗಿ ಆತಂಕ ಸೃಷ್ಟಿಸಿದೆ.
ಪಾರ್ಕ್ ಮೊಹಲ್ಲಾದ 40 ವರ್ಷದ ಪಾತ್ರೆ ವ್ಯಾಪಾರಿ ತನ್ನ ಇಡೀ ಕುಟುಂಬಕ್ಕೆ ಸೋಂಕು ಹಬ್ಬಿಸಿದ್ದ. 6 ಜನರಿಗೆ ಸೋಂಕು ದೃಢಪಟ್ಟಿದ್ದು ಈತನ ಸಹೋದರನ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಚೇರಿ ಮೊಹಲ್ಲಾದ ಮತ್ತೊಬ್ಬ ಪಾತ್ರೆ ವ್ಯಾಪಾರಿಗೂ ಈಗ ಕರೊನಾ ಸೋಂಕು ತಗುಲಿದೆ. ಪಾರ್ಕ್ ಮೊಹಲ್ಲಾ, ಕಚೇರಿ ಮೊಹಲ್ಲಾ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಸೀಲ್‌ಡೌನ್ ಪ್ರದೇಶ ಹೆಚ್ಚಳ: ಸೋಂಕಿತರು ಓಡಾಡಿರುವ ಪ್ರದೇಶ ಹಾಗೂ ಅವರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ವಾಸಿಸುತ್ತಿದ್ದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಬುಧವಾರ ಬೆಳಗ್ಗೆ ಹೊಸ ಬಸ್‌ನಿಲ್ದಾಣದ ರಸ್ತೆಯಲ್ಲಿ ಬಸ್ ನಿಲ್ದಾಣದಿಂದ ಗಣಪತಿ ದೇವಾಲಯದ ಮಾರುಕಟ್ಟೆವರೆಗೆ ಹಾಗೂ ಹಳೆ ಅಂಚೆ ಕಚೇರಿ ರಸ್ತೆಯಲ್ಲಿ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿಯಿಂದ ಮೆಕ್ಕಾ ರೈಸ್‌ಮಿಲ್ ರಸ್ತೆ ತಿರುವು ಸೇರಿ ಗಾಂಧಿನಗರ ಬಡಾವಣೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿನ ರಸ್ತೆ ವ್ಯಾಪಾರ ವಹಿವಾಟು ಒಳಗೊಂಡಂತೆ ಎಲ್ಲ ಬಗೆಯ ಓಡಾಟ, ವಹಿವಾಟುಗಳನ್ನು ನಿಷೇಧಿಸಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಲಾಗುತ್ತಿದೆ.
ನಗರದ ಪ್ರಮುಖ ವ್ಯಾಪಾರಗಳೆಲ್ಲವೂ ಇದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದ್ದು, ಬಹು ಮುಖ್ಯವಾದ ಪ್ರದೇಶವನ್ನು ಸೀಲ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ನಗರವಾಸಿಗಳು ಆತಂಕಕ್ಕೀಡಾಗಿದ್ದಾರೆ. ಈ ಮಧ್ಯೆ ಸೋಂಕಿತರ ಸಂಖ್ಯೆ ಕುರಿತಂತೆ ಕ್ಷಣಕ್ಕೊಂದು ಗುಲ್ಲು ಹಬ್ಬುತ್ತಿದ್ದು ಜನ ಗಾಬರಿಗೊಂಡಿದ್ದಾರೆ.
ತಾಲೂಕು ಕಚೇರಿಯಲ್ಲಿ ಕಟ್ಟೆಚ್ಚರ: ನಗರದಲ್ಲಿ ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ತಾಲೂಕು ಕಚೇರಿಗೆ ಭೇಟಿ ನೀಡುವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರೊಬ್ಬರನ್ನು ಕಚೇರಿ ಮುಂಬಾಗಿಲಲ್ಲಿ ಕೂರಿಸಿದ್ದು, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗುತ್ತಿತ್ತು.
ಮನೆಯಲ್ಲೇ ಸುರಕ್ಷಿತವಾಗಿರಿ: ಸಾರ್ವಜನಿಕರು ಆತಂಕಕ್ಕೆ ಒಳಗಾಗಬೇಡಿ. ವದಂತಿಗಳಿಗೆ ಕಿವಿ ಕೊಡದೆ, ಆರೋಗ್ಯ ಇಲಾಖೆ ನೀಡುವ ಮಾರ್ಗದರ್ಶನದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಗತ್ಯ ಇದ್ದಲ್ಲಿ ಮನೆಯಿಂದ ಹೊರಗಡೆಗೆ ಬನ್ನಿ. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ, ಪರಸ್ಪರ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿರಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.