ಚಿಕ್ಕಮಗಳೂರು: ಸಂಕ್ರಾಂತಿ ಹಬ್ಬದ ವಸ್ತುಗಳ ಮಾರಾಟ ಅಂಗಡಿಗಳು ಬುಧವಾರ ಸಂತೆ ದಿನ ಎಲ್ಲೆಂದರಲ್ಲಿ ಇದ್ದರೂ ಕರೊನಾ ಕಾರಣದಿಂದ ಗ್ರಾಹಕರು ಮಾತ್ರ ಮಾರುಕಟ್ಟೆಯತ್ತ ಸುಳಿಯಲಿಲ್ಲ. ಹಾಗಾಗಿ ಸಂಕ್ರಾಂತಿ ವರ್ತಕರಿಗೆ ಕಹಿಯಾಗಿ ಪರಿಣಮಿಸಿದೆ.
ಕೈಗಾಡಿ, ಹೂವು, ಹಣ್ಣು ವ್ಯಾಪಾರಿಗಳಿಗೆ ಜಾಗ ವ್ಯಾಪಾರಕ್ಕೆ ಜಾಗ ಇರಲಿಲ್ಲ. ಕೊನೆಗೆ ರಸ್ತೆ ಬದಿ ಇಟ್ಟು ವ್ಯಾಪಾರಕ್ಕೆ ಮುಂದಾದರು. ಹಬ್ಬ ಇರುವುದರಿಂದ ಅಡ್ಡಿಪಡಿಸಬಾರದೆಂದು ನಗರಸಭೆ ಕೂಡ ಕೊಂಚ ಸಡಿಲಿಕೆ ನೀಡಿತ್ತು. ಆದರೂ ಗ್ರಾಹಕರ ಕೊರತೆಯಿಂದ ಸಂತೆ ಬಿಕೋ ಎನ್ನುತ್ತಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಹೂವು, ಹಣ್ಣಿನ ಬೆಲೆ ಸ್ವಲ್ಪ ದುಬಾರಿಯಾಗಿತ್ತು. ಕಬ್ಬು ಜಲ್ಲೆಗೆ 40ರಿಂದ 50, ಎಳ್ಳು- ಬೆಲ್ಲ ಒಂದು ಕೆಜಿಗೆ 120ರಿಂದ 140, ಸಕ್ಕರೆ ಅಚ್ಚು 120 ರೂ. ಇದ್ದರೂ ಗ್ರಾಹಕರು ಮಾತ್ರ ಹೆಚ್ಚಾಗಿ ಇರಲಿಲ್ಲ.
ಕೆಲ ಮನೆಗಳಲ್ಲಿ ಈಗಾಗಲೇ ತರಾವರಿ ಸಕ್ಕರೆ ಅಚ್ಚುಗಳನ್ನು ತಯಾರಿಸಿದ್ದಾರೆ. ಕಡಲೆಬೀಜ, ಕಡಲೆ, ಕೊಬ್ಬರಿ, ಎಳ್ಳು, ಪತಾಸು, ಬಣ್ಣದ ಜೀರಿಗೆ ಪೆಪ್ಪರ್ವೆುಂಟ್ಗಳನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ಮಕರಸಂಕ್ರಾಂತಿಯ ಹಬ್ಬದಂದು ಮನೆಮನೆಗೆ ತೆರಳಿ ಎಳ್ಳು- ಬೆಲ್ಲ ಬೀರುವ ಸಂಭ್ರಮದಲ್ಲಿದ್ದಾರೆ.
ಎಳ್ಳು- ಬೆಲ್ಲ ಸಕ್ಕರೆ ಅಚ್ಚಿನ ವ್ಯಾಪಾರ ಶೇ.50ರಷ್ಟು ಇಳಿದಿದೆ. ನಾಲ್ಕು ದಿನದ ಮುನ್ನವೇ ಹತ್ತಾರು ಕೆಜಿ ಎಳ್ಳು ಮಾರಾಟವಾಗುತ್ತಿತ್ತು. ಹಬ್ಬದ ಹಿಂದಿನ ದಿನವೂ ಬೇಡಿಕೆ ಬಹಳ ಕಡಿಮೆಯಾಗಿದೆ. ಎಳ್ಳು ಪ್ರತಿ ಕೆಜಿಗೆ 180ರಿಂದ 150ಕ್ಕೆ, ಸಕ್ಕರೆ ಅಚ್ಚು 160ರಿಂದ 120 ರೂ.ಗೆ ಇಳಿಕೆಯಾದರೂ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಕರೊನಾದಿಂದಾಗಿ ಎಲ್ಲ ಹಬ್ಬಗಳಲ್ಲೂ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ವೆಂಕಟೇಶ್.
ಮೂರ್ನಾಲ್ಕು ದಿನ ಮುನ್ನವೇ ಕಬ್ಬಿನ ಜಲ್ಲೆ ವ್ಯಾಪಾರ ಮಾಡುತ್ತಿದ್ದೆವು. ಕರೊನಾ ಕಾರಣದಿಂದ ಹಿಂದಿನ ದಿನ ವ್ಯಾಪಾರಕ್ಕೆ ಅವಕಾಶ ಸಿಕ್ಕಿದೆ. ನಿರೀಕ್ಷಿಸಿದಷ್ಟು ಗ್ರಾಹಕರು ಇಲ್ಲ. ಜನರ ಕೈಯಲ್ಲೂ ಹಣದ ಕೊರತೆಯಿದೆ. ಸಂಕ್ರಾಂತಿ ಹಬ್ಬದ ದಿನ ವ್ಯಾಪಾರವಾಗುವ ನಿರೀಕ್ಷೆಯಿದೆ ಎಂಬುದು ಕಬ್ಬಿನ ವ್ಯಾಪಾರಿ ಮಹಮದ್ ಯೂಸೂಫ್ ಎಂಬುವರ ಅಭಿಪ್ರಾಯ.