ಕೋಲಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕರೊನಾಗೆ 5 ಮಂದಿ ಬಲಿಯಾಗಿದ್ದು, 57 ಮಂದಿಗೆ ಸೋಂಕು ದೃಢಪಡುವುದರೊಂದಿಗೆ ದಿನೇದಿನೆ ಸಾವು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.
ಕೋಲಾರದಲ್ಲಿ 3 ಸೋಂಕಿತರು, ಕೆಜಿಎಫ್ ಮತ್ತು ಶ್ರೀನಿವಾಸಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 5 ಮಂದಿಯನ್ನು ಕರೊನಾ ಬಲಿತೆಗೆದುಕೊಂಡಿದೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಕೋಲಾರ ತಾಲೂಕಿನಲ್ಲಿ ಒಂದೇ ದಿನ 28 ಮಂದಿಗೆ ಸೋಂಕು ಬಾಧಿಸಿದ್ದು,ಸೋಂಕಿತರ ಸಂಖ್ಯೆ 241ಕ್ಕೆ ಏರಿದೆ. 98 ಮಂದಿ ಗುಣಮುಖರಾಗಿದ್ದು, 135 ಸಕ್ರಿಯ ಪ್ರಕರಣಗಳಿವೆ. 5 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಮಟ್ಟಿಗೆ ಕೋಲಾರ ತಾಲೂಕು ಕರೊನಾ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದೆ.
ಮಾಲೂರಿನಲ್ಲಿ 11ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 42 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 16 ಮಂದಿ ಬಿಡುಗಡೆಯಾಗಿ 25 ಸಕ್ರಿಯ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಸದ್ಯಕ್ಕೆ ಅತಿ ಕಡಿಮೆ ಕರೊನಾ ಪ್ರಕರಣ ಪತ್ತೆಯಾದ ತಾಲೂಕಾಗಿ ಉಳಿದಿದೆ.
ಜಿಲ್ಲೆಯಲ್ಲಿ ಕರೊನಾ ಮೊದಲ ಪ್ರಕರಣ ದೃಢಪಟ್ಟ ಮುಳಬಾಗಿಲಿನಲ್ಲಿ ಹೊಸದಾಗಿ 13 ಮಂದಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 83ಕ್ಕೆ ಏರುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. 35 ಮಂದಿ ಬಿಡುಗಡೆಯಾದರೆ ಸಕ್ರಿಯ ಪ್ರಕರಣ 48 ಇದೆ.
ಬಂಗಾರಪೇಟೆಯಲ್ಲಿ 1ಹೊಸ ಪ್ರಕರಣವಾದರೆ, ಒಟ್ಟು ಸೋಂಕಿತರ ಸಂಖ್ಯೆ 58. 24 ಮಂದಿ ಗುಣಮುಖರಾಗಿ 33 ಸಕ್ರಿಯ ಕೇಸ್‌ಗಳಿವೆ. 1 ಸಾವು ಸಂಭವಿಸಿದೆ. ಕೆಜಿಎಫ್‌ನಲ್ಲಿ 1ಹೊಸ ಪ್ರಕರಣ ದೃಢಪಟ್ಟರೆ, ಸೋಂಕಿತರ ಸಂಖ್ಯೆ 60ಕ್ಕೇರಿದೆ. 22 ಮಂದಿ ಗುಣಹೊಂದಿ 35 ಸಕ್ರಿಯ ಕೇಸ್‌ಗಳಿವೆ. ಒಟ್ಟು 3 ಮಂದಿ ಕರೊನಾಗೆ ಬಲಿಯಾಗಿದ್ದಾರೆ.
ಶ್ರೀನಿವಾಸಪುರದಲ್ಲಿ 3 ಹೊಸ ಪ್ರಕರಣ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 46 ಇದ್ದು, 14 ಮಂದಿ ಬಿಡುಗಡೆಯಾಗಿ 28 ಸಕ್ರಿಯ ಪ್ರಕರಣಗಳಿವೆೆ. 4 ಮಂದಿ ಮೃತಪಟ್ಟಿದ್ದಾರೆ.
ಸೋಂಕಿತರಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ 10 ಮಂದಿ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾದರೆ ಉಳಿದವರು ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
9 ಮಂದಿ ಬಿಡುಗಡೆ: ಭಾನುವಾರ ಕೋಲಾರದಲ್ಲಿ 7 ಮಂದಿ ಹಾಗೂ ಕೆಜಿಎಫ್, ಮುಳಬಾಗಿಲಿನಲ್ಲಿ ತಲಾ ಒಬ್ಬರಂತೆ ಒಟ್ಟು 9 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಹೊಂದಿದವರ ಸಂಖ್ಯೆ 209ಕ್ಕೆ ಏರಿದೆ.