ಕೋಲಾರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಥಮ ಸಂಪರ್ಕದಿಂದ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ನಿಯಮ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಸಿ ಸತ್ಯಭಾಮ ಮನವಿ ಮಾಡಿದರು.
ಹಿಂದೆ ಪ್ರಥಮ ಸಂಪರ್ಕ ಹೊಂದಿರುವವರಿಗೆ 28 ದಿನವಾದರೂ ನೆಗೆಟಿವ್ ಬರುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸೋಂಕಿತರ ಶೇ.29ರಷ್ಟು ಪ್ರಥಮ ಸಂಪರ್ಕಗಳು ಪಾಸಿಟಿವ್ ಬರುತ್ತಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಕರೊನಾ ಹರಡದಂತೆ ತಡೆಗಟ್ಟಲು ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಯಾರಿಗಾದರು ಕೆಮ್ಮು ನೆಗಡಿ ಶೀತ ತಲೆನೋವು ಜ್ವರದ ಲಕ್ಷಣ ಕಂಡುಬಂದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರೂ ಆತಂಕ ಪಡಬಾರದು.
ಕೋವಿಡ್ ಗುಣಮುಖವಾಗುವ ಕಾಯಿಲೆಯಾಗಿದ್ದು ನಿರ್ದಿಷ್ಟ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಕೋರಿದರು.
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 474 ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, 156 ಜನ ಗುಣಮುಖರಾಗಿದ್ದಾರೆ. ಶನಿವಾರ 42 ಜನರನ್ನು ಬಿಡುಗಡೆ ಮಾಡಲಾಗುವುದು. ಜಿಲ್ಲೆಯಲ್ಲಿ 309 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ 9 ಮಂದಿ ಕರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕರೊನಾ ಸಂಬಂಧ ಚಿಕಿತ್ಸೆಗೆ ಒಟ್ಟು 5,981 ಹಾಸಿಗೆ ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 282 ಆಕ್ಸಿಜನ್ ಬೆಡ್, 52 ವೆಂಟಿಲೇಟರ್‌ಗಳಿವೆ. ಮುಂದಿನ ದಿನಗಳಲ್ಲೂ ಉತ್ತಮ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಸೀಲ್ ಡೌನ್, ಕಂಟೇನ್ಮೆಂಟ್ ಜೋನ್ ಗಳಿಗೆ ಯಾವುದೇ ಅನುದಾನ ಬರುವುದಿಲ್ಲ. ಜನರೇ ತಮ್ಮ ಸ್ವಂತ ಹಣದಿಂದ ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.
ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ನಡೆಸಲಾಗುತ್ತಿದ್ದು, ರಾಜ್ಯದಲ್ಲಿಯೇ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿದೆ. ಪ್ರತಿ ತಾಲೂಕಿಗೆ ಒಂದು ಕ್ರೂನಟ್ ಯಂತ್ರ ಖರೀದಿಸಲು ಅನುಮತಿ ನೀಡಿದ್ದು, ಇದರಿಂದ ಇನ್ನೂ ಹೆಚ್ಚಿನ ಪರೀಕ್ಷೆ ನಡೆಸಲು ಅನುಕೂಲವಾಗುತ್ತದೆ ಎಂದರು.
ಕರೊನಾಗೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಮೊಟ್ಟೆ, ಮೊಳಕೆಕಾಳು, ಹಣ್ಣು. ಮಾಂಸಾಹಾರ ಸೇವಿಸುವವರಿಗೆ ಮಾಂಸಾಹಾರದ ಊಟ ಈ ರೀತಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ನೀಡಿ ಸರಾಸರಿ 7 ದಿನಗಳಲ್ಲಿ ಗುಣಮುಖರನ್ನಾಗಿ ಮಾಡಲಾಗುತ್ತಿದೆ ಎಂದರು.
ಡಿಎಚ್‌ಒ ಡಾ.ಎಸ್.ಎನ್.ವಿಜಯ್ ಕುಮಾರ್, ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಚಾರಿಣಿ. ತಾಲೂಕು ಆರೋಗ್ಯಾಧಿಕಾರಿ ಡಾ.ರಮ್ಯ ದೀಪಿಕಾ ಉಪಸ್ಥಿತರಿದ್ದರು.
ಈ ಭಾನುವಾರವೂ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಜಿಲ್ಲೆಯ ರೈತರಿಗೆ ಅನನುಕೂಲವಾಗಬಾರದು ಎಂದು ಕೋಲಾರ ಎಪಿಎಂಸಿಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದೆ. ರೈತರು ಹಾಗೂ ವ್ಯಾಪಾರಿಗಳು ದೈಹಿಕ ಅಂತರ ಕಾಯ್ದುಕೊಂಡು ವ್ಯಾಪಾರ ನಡೆಸಬೇಕು.
ಸತ್ಯಭಾಮ, ಜಿಲ್ಲಾಧಿಕಾರಿ