ಕೋಲಾರ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿಯ ಓಟ ಇನ್ನಷ್ಟು ವೇಗ ಪಡೆದಿದ್ದು, ಸೋಮವಾರ 22 ಮಂದಿಗೆ ಸೋಂಕು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ.
ಕೋಲಾರದಲ್ಲಿ 16 ಪ್ರಕರಣ ದೃಢಪಟ್ಟರೆ, ಮಾಲೂರು 3, ಬಂಗಾರಪೇಟೆ 2 ಹಾಗೂ ಮುಳಬಾಗಿಲಿನಲ್ಲಿ 1 ಪ್ರಕರಣ ದೃಢಪಟ್ಟಿದೆ. ಸೋಂಕಿತರ ಪ್ರಥಮ ಸಂಪರ್ಕ ಹೊಂದಿರುವ 134 ಮಂದಿ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವ 87 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ಬ್ರಾಹ್ಮಣರ ಬೀದಿಯ ವ್ಯಕ್ತಿಯೊಬ್ಬರಿಗೆ ಕರೊನಾ ಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಕೋಲಾರದ ಹೋಳೂರು ಹೋಬಳಿಯ ರಾಂಪುರದಲ್ಲಿ ಹೃದ್ರೋಗ ಚಿಕಿತ್ಸೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿಯೊಬ್ಬರಿಗೆ ಕರೊನಾ ದೃಢಪಟ್ಟಿದ್ದರಿಂದ ಬೆಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತರ ಪೈಕಿ 13 ಜನ ವಿಷಮಶೀತ ಜ್ವರದಿಂದ ಬಳಲುತ್ತಿದ್ದಾರೆ. ಕೋಲಾರದ 28 ವರ್ಷ (ಪುರುಷ), 82 ವರ್ಷದ ವೃದ್ಧೆ, 70 ಹಾಗೂ 66 ವರ್ಷದ ಇಬ್ಬರು ವೃದ್ಧರು, 32 ವರ್ಷದ ಆರೋಗ್ಯ ಕಾರ್ಯಕರ್ತೆ ಸೇರಿ ಕೋಲಾರದಲ್ಲಿ ಒಟ್ಟು 16 ಪ್ರಕರಣ ದೃಢಪಟ್ಟಿದೆ.
ಮಾಲೂರು ಪಟ್ಟಣದ 16ನೇ ವಾರ್ಡಿನ ತಾಲೂಕು ಕಚೇರಿ ಹಿಂಭಾಗದಲ್ಲಿ ಸೋಂಕಿತ ಮಹಿಳೆ ಸಂಪರ್ಕದಿಂದ 25 ವರ್ಷದ ಯುವಕನಲ್ಲಿ ಸೋಂಕು ಹರಡಿದೆ, ಪಟ್ಟಣದ 6ನೇ ವಾರ್ಡಿನ ಮಾರಿಕಾಂಬಾ ದೊಡ್ಡಮಸೀದಿ ರಸ್ತೆಯ ನಿವಾಸಿ ಬೆಂಗಳೂರಿನ ಖಾಸಗಿ ಲ್ಯಾಬ್‌ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎರಡು ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಮಾಸ್ತಿ ಹೋಬಳಿಯ ಕೊಂಡೇನಗಹಳ್ಳಿ ವ್ಯಕ್ತಿಯಲ್ಲಿ ಕರೊನಾ ದೃಢಪಟ್ಟಿದ್ದು, ತಹಸೀಲ್ದಾರ್ ಮಂಜುನಾಥ್ ಹಾಗೂ ಅಧಿಕಾರಿಗಳು ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ.
3 ಜನ ಬಿಡುಗಡೆ: ಸೋಂಕಿತರಲ್ಲಿ ಕೋಲಾರ ತಾಲೂಕಿನ ಮೂವರು ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಬಿಡುಗಡೆ ಹೊಂದಿದವರ ಸಂಖ್ಯೆ 127ಕ್ಕೆ ಏರಿದೆ. ನಾಲ್ವರು ಮೃತಪಟ್ಟಿದ್ದರೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.