ಕೋಲಾರ: ಜಿಲ್ಲೆಯಲ್ಲಿ ಶನಿವಾರ ಮತ್ತೆ 11 ಮಂದಿಗೆ ಕರೊನಾ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 161ಕ್ಕೆ ಏರಿಕೆಯಾದರೆ ಮೂವರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 94 ಆಗಿದೆ.
ಕೋಲಾರ ತಾಲೂಕಿನಲ್ಲಿ 5 ಮಂದಿಗೆ ಸೋಂಕು ದೃಢಪಟ್ಟರೆ, ಕೆಜಿಎಫ್‌ನಲ್ಲಿ 4, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ತಲಾ ಒಬ್ಬರು ಸೇರಿ 11 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 76 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 55 ಸೇರಿ ಒಟ್ಟು 131 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 250 ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿದ್ದು, 120 ಮಾದರಿಗಳು ನೆಗೆಟಿವ್ ಬಂದಿದೆ.
ಸೋಂಕಿತರು: ಕೋಲಾರ ರಹಮತ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಗೆ ಸೋಂಕು ಹರಡಿದೆ. ಇವರು ನಗರದ ಕ್ಲಾಕ್ ಟವರ್ ಸಮೀಪದ ದರ್ಗಾ ಮೊಹಲ್ಲಾದಲ್ಲಿ ಸೋಂಕಿನಿಂದ ಜೂ. 29ರಂದು ಮೃತಪಟ್ಟ ವೃದ್ಧರ ಸಂಬಂಧಿ. ವೈದ್ಯೆಯೊಂದಿಗೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಇಬ್ಬರು ಮಹಿಳೆಯರಿಗೆ ಕೆಲ ದಿನಗಳ ಹಿಂದೆಯೇ ಸೋಂಕು ದೃಢಪಟ್ಟಿತ್ತು. ಮೃತ ವ್ಯಕ್ತಿಯಿಂದ ಮೂವರಿಗೆ ಸೋಂಕು ಹರಡಿದಂತಾಗಿದೆ.
ಜಾಲಪ್ಪ ಆಸ್ಪತ್ರೆ ಕೋವಿಡ್ ವಾರ್ಡ್‌ನಲ್ಲಿ ಸೋಂಕಿತರ ಸಂಪರ್ಕದಿಂದ ಕರೊನಾ ಕಾಣಿಸಿಕೊಂಡಿದ್ದ ಆರೋಗ್ಯ ಕಾರ್ಯಕರ್ತ ಪಿ-9545 (29) ಇವರಿಂದ 45 ವರ್ಷದ ಮಹಿಳೆಗೆ ಹಾಗೂ 67 ವರ್ಷದ ಪುರುಷರೊಬ್ಬರಿಗೆ ಸೋಂಕು ಹರಡಿದೆ. ಇದೇ ಆಸ್ಪತ್ರೆಯಲ್ಲಿ ಪಿ-8060ರ ಸಂಪರ್ಕದಿಂದ ಸೋಂಕು ಹರಡಿದ್ದ ಪಿ-9496, 9497 ಹಾಗೂ 0488ರ ಸಂಪರ್ಕದಿಂದ 23 ವರ್ಷದ ಮಹಿಳೆಗೆ ಕರೊನಾ ಬಂದಿದೆ.
ಶ್ರೀನಿವಾಸಪುರದಲ್ಲಿ ವಿಷಮಶೀತ ಜ್ವರದಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ಬಂದಿದೆ. ಕೋಲಾರದ 24 ವರ್ಷದ ಮಹಿಳೆ, ಮುಳಬಾಗಿಲಿನ 24 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಕೆಜಿಎಫ್‌ನಲ್ಲಿ ನಾಲ್ವರಿಗೆ ಕರೊನಾ ಪತ್ತೆಯಾಗಿದೆ.
3 ಮಂದಿ ಗುಣ: ಕೋಲಾರದ ಪಿ-9233, ಬಂಗಾರಪೇಟೆಯ ಪಿ-8808 ಹಾಗೂ ಶ್ರೀನಿವಾಸಪುರದ ಪಿ-10445 ಸೋಂಕಿನಿಂದ ಮುಕ್ತರಾಗಿ ಮನೆಗೆ ತೆರಳಿದ್ದು, 14 ದಿನ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ. ಜಿಲ್ಲೆಯ ಒಟ್ಟು 161 ಸೋಂಕಿತರಲ್ಲಿ 65 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 94 ಆಗಿದೆ. ಕ್ವಾರಂಟೈನ್‌ನಲ್ಲಿದ್ದವರ ಓಡಾಟ: ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಉತ್ತರ ಪ್ರದೇಶ ಮೂಲದ ವ್ಯಕ್ತಿ ಕ್ವಾರಂಟೈನ್ ಉಲ್ಲಂಸಿ ಓಡಾಡುತ್ತಿರುವುದರಿಂದ ಆತಂಕಗೊಂಡ ಗ್ರಾಮಸ್ಥರು ವ್ಯಕ್ತಿಯ ಕೈಮೇಲಿದ್ದ ಸೀಲ್ ಗಮನಿಸಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೋಲಾರ ನಗರದಲ್ಲೂ ಕ್ವಾರಂಟೈನ್‌ನಲ್ಲಿ ಇರಬೇಕಾದ ಸೋಂಕಿತನ ಸಂಪರ್ಕದಲ್ಲಿದ್ದವರು ಕೂಡ ನಿಯಮ ಉಲ್ಲಂಘಿಸಿ ಖರೀದಿ ನೆಪದಲ್ಲಿ ಅಂಗಡಿ ಮುಂಗಟ್ಟು ಸುತ್ತುತ್ತಿದ್ದಾರೆ ಎಂಬ ದೂರು ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ, ಸಾವಿನ ಸಂಖ್ಯೆ ಕಡಿಮೆ. ಸರ್ಕಾರದ ಮಾರ್ಗಸೂಚಿ ಪಾಲಿಸಿದರೆ ಜೀವ ಉಳಿಯಬಹುದು. ನಿರ್ಲಕ್ಷಿಸಿದರೆ ಅಪಾಯ ಖಂಡಿತ. ಸೋಂಕಿತರ ಚಿಕಿತ್ಸೆಗೆ ಹಾಸಿಗೆ ಕೊರತೆ ಇಲ್ಲ. ಎಲ್ಲರಿಗೂ ಒಂದೇ ಕಾನೂನು. ಕರೊನಾ ವಿಚಾರದಲ್ಲಿ ಡಿಸಿ ಸುಪ್ರೀಂ, ಅವರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅವರ ಆದೇಶವನ್ನು ಎಲ್ಲ ಖಾಸಗಿ ಆಸ್ಪತ್ರೆಗಳೂ ಪಾಲಿಸಬೇಕು. ಎಚ್. ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ