ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 11 ಮಂದಿಗೆ ಕರೊನಾ ದೃಢಪಟ್ಟು ಸೋಂಕಿತರ ಸಂಖ್ಯೆ 150ಕ್ಕೇರಿದ್ದು, 86 ಸಕ್ರಿಯ ಪ್ರಕರಣಗಳಿವೆ.
ಕೋಲಾರ ತಾಲೂಕಿನಲ್ಲಿ 5 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮಾಲೂರು, ಮುಳಬಾಗಿಲಿನಲ್ಲಿ ತಲಾ 1, ಬಂಗಾರಪೇಟೆ ಮತ್ತು ಕೆಜಿಎಫ್‌ನಲ್ಲಿ ತಲಾ 2 ಪ್ರಕರಣ ವರದಿಯಾಗಿವೆ.
ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಜಿಲ್ಲಾಸ್ಪತ್ರೆಗೆ ದಾಖಲಾದ ಕೋಲಾರದ ಮಹಾಲಕ್ಷ್ಮೀ ಬಡಾವಣೆಯ 53 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಿ-12003 ಅವರಿಂದ ಕೋಲಾರದ 35 ವರ್ಷ ಹಾಗೂ ಮುಳಬಾಗಿಲಿನ 62 ವರ್ಷದ ವ್ಯಕ್ತಿಗೆ ಹಾಗೂ ಪ್ರಯಾಣದ ಹಿನ್ನೆಲೆಯಲ್ಲಿ ಕೋಲಾರದ ಮತ್ತೊಬ್ಬರಿಗೆ (28 ವರ್ಷ) ಸೋಂಕು ಕಂಡುಬಂದಿದೆ. ಕೆಜಿಎಫ್‌ನಲ್ಲಿ ಉಸಿರಾಟದ ಸಮಸ್ಯೆಯಿಂದ ಬಳುತ್ತಿದ್ದ 57 ವರ್ಷದ ಪುರುಷ, ಪ್ರಯಾಣದ ಹಿನ್ನೆಲೆಯುಳ್ಳ 25 ವರ್ಷದ ಯುವತಿಗೆ ಕರೊನಾ ಬಂದಿದೆ. ಇವರೆಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಗಾರಪೇಟೆಯಲ್ಲಿ ಸೋಂಕಿತ ಪಿ-15407 ರಿಂದ 18 ವರ್ಷದ ಮಹಿಳೆಗೆ ಹಾಗೂ ಪಿ-11999 ರಿಂದ 45 ವರ್ಷದ ಮಹಿಳೆಗೆ ಸೋಂಕು ಹರಡಿದೆ. ಮಾಲೂರಿನಲ್ಲಿ ಪ್ರಯಾಣದ ಹಿನ್ನೆಲೆ ಇರುವ 30 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು, ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತರ ಪ್ರಥಮ ಸಂಪರ್ಕದಲ್ಲಿದ್ದ 76 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 55 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಶುಕ್ರವಾರ 120 ಮಾದರಿಗಳ ವರದಿ ನೆಗೆಟಿವ್ ಬಂದಿದೆ.
ಗರ್ಭಿಣಿಗೆ ಸೋಂಕು ದೃಢ: ಬೇತಮಂಗಲ ಠಾಣಾ ವ್ಯಾಪ್ತಿಯ ಕ್ಯಾಸಂಬಳ್ಳಿ ಹೋಬಳಿಯ ಸುಂದರಪಾಳ್ಯದಲ್ಲಿ 26 ವರ್ಷದ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಎರಡು ತಿಂಗಳ ಹಿಂದೆ ಹೆರಿಗೆಗಾಗಿ ಬೆಂಗಳೂರಿನಿಂದ ತವರು ಮನೆ ಸುಂದರಪಾಳ್ಯಕ್ಕೆ ಬಂದಿದ್ದರು. ಒಂದು ತಿಂಗಳ ಹಿಂದೆ ಅಕ್ಕನ ಮನೆಯಾದ ಆಂಧ್ರ ಪ್ರದೇಶದ ರಾಮಕುಪ್ಪಂ ಗೆ ಹೋಗಿದ್ದರು. ಹತ್ತು ದಿನಗಳ ಹಿಂದೆ ಜ್ವರ, ಕೆಮ್ಮು, ನೆಗಡಿ ಹಿನ್ನೆಲೆಯಲ್ಲಿ ಆಂಧ್ರದ ವಿಕೋಟದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಕರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಕರ್ನಾಟಕಕ್ಕೆ ಕಳುಹಿಸಿದ್ದರು.
ಕೋಲಾರದ ದೇವರಾಜು ಅರಸು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜು.1ರಂದು ಪರೀಕ್ಷೆ ಮಾಡಿಸಿದ್ದು, ಗುರುವಾರ ಸೋಂಕು ದೃಢಪಟ್ಟಿದೆ. ಸೋಂಕಿತೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಮಂದಿಯನ್ನು ಚಿಗಾಪುರದ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮಹಾರಾಷ್ಟ್ರಕ್ಕೆ ತೆರಳಿದ್ದವರಿಗೆ ಪಾಸಿಟಿವ್: ಕೆಜಿಎಫ್ ತಾಲೂಕಿನ ಬೋರಿಲಾಲ್ ಪೇಟೆಯ 54 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದ್ದು, ಸೋಂಕಿತನನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಾಪಾರಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಇವರು ಕೆಲ ದಿನಗಳ ಹಿಂದೆ ರಾಜ್ಯಕ್ಕೆ ಮರಳಿದ್ದರು. ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಸರ್ಕಾರಿ ಸಾರ್ವಜನಿಕ ಆಸ್ಪತ್ರ್ರೆಗೆ ದಾಖಲಾಗಿ ಕೋವಿಡ್ ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ. ಬೋರಿಲಾಲ್ ಪೇಟೆಯನ್ನು ಸೀಲ್‌ಡೌನ್ ಮಾಡಲಾಗಿದೆ.