ಕೋಲಾರ: ಜಿಲ್ಲೆಯಲ್ಲಿ ಗುರುವಾರ ಕರೊನಾ ಆರ್ಭಟ ಮತ್ತೆ ತೀವ್ರಗೊಂಡಿದ್ದು, ಕೋವಿಡ್ ಆಸ್ಪತ್ರೆಯ ವೈದ್ಯ ಸೇರಿ 13 ಮಂದಿಗೆ ಸೋಂಕು ತಗುಲಿದೆ.
ಕೋಲಾರದಲ್ಲಿ 7 ಮುಳಬಾಗಿಲು 4, ಬಂಗಾರಪೇಟೆ ಮತ್ತು ಶ್ರೀನಿವಾಸಪುರದಲ್ಲಿ ತಲಾ 1 ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ.
5 ಮಂದಿ ಬಿಡುಗಡೆ: ಕೆಲ ದಿನಗಳ ಹಿಂದಷ್ಟೇ ಸೋಂಕು ದೃಢಪಟ್ಟಿದ್ದ ಕೋಲಾರದ ಆರೋಗ್ಯ ಕಾರ್ಯಕರ್ತ ಪಿ-14,434 ಹಾಗೂ ಆರೋಗ್ಯ ಕಾರ್ಯಕರ್ತ ಪಿ-9944, ಕೆಜಿಎಫ್‌ನ ಪಿ-10837, ಮುಳಬಾಗಿಲಿನ ಪಿ 9941, 9544 ಗುಣವಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ 62ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 76.
ವೈದ್ಯರಿಗೆ ಕರೊನಾ: ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರಿಗೆ ಪಿ-16750 (49 ವರ್ಷ) ಕರೊನಾ ಸೋಂಕು ದೃಢಪಟ್ಟಿದೆ. ಇವರು ಪ್ರತಿದಿನ ಬೆಂಗಳೂರಿನಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದರು. ಬುಧವಾರ ಕೂಡ ಕೋವಿಡ್ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಲೂರು ಪಟ್ಟಣದ 11ನೇ ವಾರ್ಡ್‌ನ ನಿವಾಸಿಯಾಗಿದ್ದ ವೈದ್ಯರಿಗೆ ಸೋಂಕು ದೃಢಪಟ್ಟಿತ್ತು.
ಎಸ್‌ಎನ್‌ಆರ್ ಆಸ್ಪತ್ರೆ ಆವರಣದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಕಂಪ್ಯೂಟರ್ ಆಪರೇಟರ್ ಒಬ್ಬರಿಗೆ ಸೋಂಕು ತಗುಲಿದೆ. ಇವರು ಕಾರಂಜಿಕಟ್ಟೆ ಬಡಾವಣೆ 6ನೇ ಕ್ರಾಸ್ ನಿವಾಸಿ. ಜಿಲ್ಲಾಸ್ಪತ್ರೆ ವೈದ್ಯರಿಬ್ಬರು ಹಾಗೂ ಸರ್ವೇಕ್ಷಣಾಧಿಕಾರಿ ಕಚೇರಿ ಸಿಬ್ಬಂದಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಇವರೊಂದಿಗೆ ಸಂಪರ್ಕದಲ್ಲಿದ್ದ ವೈದ್ಯ ಸಿಬ್ಬಂದಿ, ನರ್ಸ್, ಡಿ ಗ್ರೂಪ್ ನೌಕರರು ಸೇರಿ 30 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಕೋಲಾರ ನಗರದ ಮಹಾಲಕ್ಷ್ಮೀ ಲೇಔಟ್‌ನಲ್ಲಿ ತಾಯಿ ಮತ್ತು ಮಗಳಿಗೆ ಸೋಂಕು ಹರಡಿದೆ. ಇವರು ನಗರದ ದರ್ಗಾ ಮೊಹಲ್ಲಾದಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯು ಶವಸಂಸ್ಕಾರದಲ್ಲಿ ಭಾಗವಹಿಸಿದ್ದರು. ಮೃತ ಸೋಂಕಿತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರು ಹಾಗೂ ಸಿಬ್ಬಂದಿಯೊಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ
ಗರ್ಭಿಣಿಗೆ ಪಾಸಿಟಿವ್: ಪೇಟೆಚಾಮನಹಳ್ಳಿಯ 49 ವರ್ಷದ ಪುರುಷರೊಬ್ಬರಿಗೆ (ಪಿ-128) ಸೋಂಕು ಹರಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ ಇವರು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಹೋಗಿ ಬಂದಿದ್ದರು. ನಗರದ ಕ್ಲಾಕ್‌ಟವರ್ ಬಳಿಯ ಎಸ್.ಎಸ್.ಮಖಾನ್ ಬಡಾವಣೆ ವ್ಯಕ್ತಿಯೊಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೋಲಾರ ತಾಲೂಕಿನ ಕೂತಂಡಹಳ್ಳಿಯ 19 ವರ್ಷದ ಯುವತಿಗೆ ಸೋಂಕು ತಗುಲಿದೆ. ಬಂಗಾರಪೇಟೆಯ ಚಿಕ್ಕಅಂಕಂಡಹಳ್ಳಿ ಗರ್ಭಿಣಿಗೆ (27 ವರ್ಷ) ಸೋಂಕು ತಗುಲಿದ್ದು, ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.