ಜಿಲ್ಲೆ

ಸಿಬ್ಬಂದಿ ತುರ್ತು ನೇಮಕಕ್ಕೆ ಡಿಸಿಎಂ ಅಶ್ವತ್ಥನಾರಾಯಣ ಸೂಚನೆ

Kolar

ಬೆಂಗಳೂರು: ಕೋಲಾರ ಜಿಲ್ಲೆಯ ಕರೊನಾ ಸ್ಥಿತಿಗತಿಗಳ ಬಗ್ಗೆ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಮಹತ್ವದ ಸಮಾಲೋಚನೆ ನಡೆಸಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೊರತೆ ಇರುವ ವೈದ್ಯಕೀಯ ಸಿಬ್ಬಂದಿಯನ್ನು ಕೂಡಲೇ ನೇಮಕ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಬೆಂಗಳೂರಿನಲ್ಲಿ ಬುಧವಾರ ಜಿಲ್ಲಾಧಿಕಾರಿ ಸತ್ಯಭಾಮ, ಜಿಪಂ ಸಿಇಒ ದರ್ಶನ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ವಿಜಯಕುಮಾರ್ ಜತೆ ಜತೆ ವಿಡಿಯೋ ಸಂವಾದ ನಡೆಸಿದರಲ್ಲದೆ, ದಿನೇದಿನೆ ಕರೊನಾ ಸೋಂಕಿತರು ಹೆಚ್ಚುತ್ತಿದ್ದು ಯಾವುದೇ ಕಠಿಣ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿರಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿರುವ ಸೋಂಕಿತರ ಪ್ರಮಾಣ, ಆಸ್ಪತ್ರೆ ಹಾಸಿಗೆಗಳು, ಗಂಟಲು ದ್ರವ ಸಂಗ್ರಹ, ಫೀವರ್ ಕ್ಲಿನಿಕ್‌ಗಳ ನಿರ್ವಹಣೆ, ಆಂಬುಲೆನ್ಸ್‌ಗಳ ಸೌಲಭ್ಯ ಸೇರಿ ಎಲ್ಲ ವಿಷಯಗಳ ಬಗ್ಗೆಯೂ ಡಿಸಿಎಂ ಮಾಹಿತಿ ಪಡೆದರಲ್ಲದೆ, ಅಗತ್ಯವಿರುವ ಸಿಬ್ಬಂದಿಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ನಿಯಮಗಳಡಿಯಲ್ಲಿ ಕೂಡಲೇ ನೇಮಕ ಮಾಡಿಕೊಳ್ಳಿ ಎಂದರು.

ಸದ್ಯಕ್ಕೆ ಜಿಲ್ಲೆಯಲ್ಲಿ 600 ಬೆಡ್‌ಗಳಿದ್ದು, ನಿರ್ವಹಣೆಗೆ ಕೇವಲ 34 ವೈದ್ಯರು, 54 ನರ್ಸ್‌ಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಡಿಸಿಎಂ ಗಮನಕ್ಕೆ ತಂದರು.ತಕ್ಷಣವೇ ನೇಮಕಾತಿ ಪ್ರಕ್ರಿಯೆ ಮುಗಿಸಿ, ಎನ್‌ಎಚ್‌ಎಂ ಮೂಲಕವೇ ಅಗತ್ಯವಿರುವ ಮೈಕ್ರೋ ಬಯಾಲಿಜಿಸ್ಟ್ ಗಳನ್ನು ನೇಮಿಸಿಕೊಳ್ಳಿ ಎಂದು ಡಿಸಿಎಂ ತಿಳಿಸಿದರು.

ಖಾಸಗಿ ಆಸ್ಪತ್ರೆ ವಿರುದ್ಧ ಡಿಸಿ ದೂರು: ಕೋಲಾರದ ಹೊರ ವಲಯದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ 1,150 ಬೆಡ್‌ಗಳಿದ್ದರೂ ಅವರಿಂದ ಜಿಲ್ಲಾಡಳಿತಕ್ಕೆ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿ, ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಅವರು, ಯಾವ ಆಸ್ಪತ್ರೆಯೂ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಮತ್ತೆ ನೀವೇ ಹೋಗಿ ಆಡಳಿತ ಮಂಡಳಿ ಜತೆ ಮಾತನಾಡಿ. ಕೊನೇಪಕ್ಷ 300 ಬೆಡ್‌ಗಳನ್ನಾದರೂ ಅವರು ನೀಡಲೇಬೇಕು. ಅಗತ್ಯ ಬಿದ್ದರೆ ನಾನೇ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ತಾಲೂಕಿಗೊಂದು ಟ್ರೂನೆಟ್ ಯಂತ್ರ: ಅತ್ಯಗತ್ಯವಾಗಿ ಬೇಕಾಗಿರುವ ಟ್ರೂನೆಟ್ ಯಂತ್ರಗಳನ್ನು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅಳವಡಿಸಿ. ಇದಕ್ಕೆ ಅಗತ್ಯ ಹಣವನ್ನು ಜಿಲ್ಲೆಯ ಖನಿಜ ನಿಧಿಯಿಂದ ಬಳಸಿ ಎಂದು ಡಿಸಿಎಂ ಸೂಚಿಸಿದರು.

ವೈದ್ಯರ ಬಗ್ಗೆ ಮೆಚ್ಚುಗೆ: ಸೋಂಕಿತ ರಿಗೆ ಆನ್‌ಲೈನ್ ಮೂಲಕ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ವೈದ್ಯರ ಬಗ್ಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಕರೊನಾ ಸೋಂಕಿತರನ್ನು ನೋಡುತ್ತಿರುವ ವೈದ್ಯರಿಗೂ ಕೋವಿಡ್ ವಿಮೆ ಸೌಲಭ್ಯ ನೀಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ನಿಯಮದಂತೆ ಹಣ ಪಾವತಿಸಲಾಗುವುದು ಎಂದು ಡಿಸಿಎಂ ಹೇಳಿದರು.