ಜಿಲ್ಲೆ

ಕಾಣದ ಕರೊನಾ ಸಮುದಾಯಕ್ಕೆ ಕಂಟಕ

Kolar

ಕೋಲಾರ: ಕಣ್ಣಿಗೆ ಕಾಣದ ಕರೊನಾ ಸಮುದಾಯಕ್ಕೆ ಕಂಟಕವಾಗಿದೆ. ಮಾರ್ಚ್ 25ರಿಂದ ಮೇ 12ರವರೆಗೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ ಮಹಾಮಾರಿ ಈಗ ಜನರ ನಿದ್ರೆಗೆ ಭಂಗವನ್ನುಂಟು ಮಾಡಿದೆ.

ಮುಳಬಾಗಿಲಿಗೆ ಹೊರಗಿನಿಂದ ಬಂದಿದ್ದ ಐವರಲ್ಲಿ ಕಾಣಿಸಿಕೊಂಡ ಪಾಸಿಟಿವ್ ಎಲ್ಲ ತಾಲೂಕಿಗೂ ವ್ಯಾಪಿಸಿದೆ, ಜಿಲ್ಲಾ ಆಡಳಿತ ಸೋಂಕು ತಡೆಯಲು ಕಳೆದ ಎರಡು ತಿಂಗಳ ಹಿಂದೆ ಕೈಗೊಂಡ ಕ್ರಮ ಪ್ರಶಂಸಾರ್ಹವಾದರೂ ಕಳೆದ ಒಂದು ವಾರದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿರುವುದರಿಂದ ಹತೋಟಿಗೆ ತರಲಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.

ಮದುವೆಗಾಗಿ ದೆಹಲಿಯಿಂದ ಕೆಜಿಎಫ್‌ನ ತೂಕಲ್ ಗ್ರಾಮಕ್ಕೆ ಬಂದಿದ್ದ ಪಿ-8495 (43) ಮಹಿಳೆ ಹಾಗೂ ಬೆಂಗಳೂರಿನಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸಪುರದ ತಮ್ಮಿರೆಡ್ಡಿಗಾರಿಪಲ್ಲಿಯ ವ್ಯಕ್ತಿ (38) ಮೃತಪಟ್ಟಿದ್ದು, 116 ಸೋಂಕಿತರಲ್ಲಿ 52 ಮಂದಿ ಗುಣವಾಗಿದ್ದಾರೆ. ಆದರೆ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಆರೋಗ್ಯ ಇಲಾಖೆಗೆ ಕರೊನಾ ಪತ್ತೆಹಚ್ಚಿ ಜನರ ಜೀವ ರಕ್ಷಣೆ ಮಾಡುವುದು ಕಠಿಣವಾಗಿ ಪರಿಣಮಿಸಿದೆ.

ಜಿಲ್ಲೆಯ ಜನಸಂಖ್ಯೆ 18 ಲಕ್ಷ ದಾಟಿದೆ. ಈಗಾಗಲೆ ನೂರಾರು ಜನರಲ್ಲಿ ಕರೊನಾ ಆವರಿಸಿಕೊಂಡಿರುವುದು ದೃಢಪಟ್ಟಿದೆ. ಸಾವಿರಾರು ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಆಗಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಪರೀಕ್ಷೆಗೆ ಲ್ಯಾಬ್ ಇದ್ದರೂ ತ್ವರಿತಗತಿಯಲ್ಲಿ ವರದಿ ನೀಡಲು ಸಮಸ್ಯೆಯಾಗಿದೆ.

ಇನ್ನು 3 ತಿಂಗಳಲ್ಲಿ ಸೋಂಕಿತರ ಸಂಖ್ಯೆ 400ರಿಂದ 500 ಗಡಿ ದಾಟಬಹುದೆಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ಸರ್ಕಾರ ಸಮರೋಪಾದಿಯಲ್ಲಿ ಪ್ರತಿ ಮನೆಯ ಸದಸ್ಯರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ಸೋಂಕು ಪತ್ತೆ ಜತೆಗೆ ನಿಯಂತ್ರಣಕ್ಕೆ ದಾರಿ ಕಂಡುಕೊಳ್ಳದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಪರೀಕ್ಷೆಗೆ ಒಬ್ಬರಿಗೆ 3500 ರೂ. ಶುಲ್ಕ ನಿಗದಿ ಮಾಡಿರುವುದರಿಂದ ಬಡವರು, ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡಿರುವುದರಿಂದ ಲ್ಯಾಬ್‌ಗೆ ಬೇಡಿಕೆ ಹೆಚ್ಚಾಗಿದೆ, ಸರ್ಕಾರ ಮಾದರಿಗಳ ಪರೀಕ್ಷೆಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಕರೊನಾ ಅಟ್ಟಹಾಸ ಹೆಚ್ಚಾಗುವ ಸಾಧ್ಯತೆಗಳಿವೆ.

ಜಿಲ್ಲೆಯಲ್ಲಿ ಸೋಂಕಿತರು ವಾಸವಿದ್ದ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಮಾಡಿದ್ದರೂ ಜನರಲ್ಲಿ ಉದ್ಧಟತನ ಕಡಿಮೆಯಾಗಿಲ್ಲ, ದೈಹಿಕ ಅಂತರ ಎಂಬುದು ನಗೆಪಾಟಲಿಗೆ ಗುರಿಯಾಗಿದೆ. ಸೋಂಕಿನ ಭಯವಿಲ್ಲದೆ ಅಲೆದಾಡುತ್ತಿದ್ದಾರೆ, ಸೋಂಕಿತರು ಆಸ್ಪತ್ರೆಯಲ್ಲಿದ್ದರೆ, ಕಂಟೇನ್ಮಂಟ್ ಜೋನ್‌ನಲ್ಲಿ ಕ್ವಾರಂಟೈನ್ ಆಗಿರುವ ಜನರನ್ನು ಆಸ್ಪಶ್ಯರಂತೆ ಕಾಣಲಾಗುತ್ತಿದ್ದು, ಜನರಲ್ಲಿ ಅರಿವು ಮೂಡಿಸಲು ಆರೋಗ್ಯ ಇಲಾಖೆ ಕಾರ್ಯಕ್ರಮ ರೂಪಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಎಚ್ಚರ ತಪ್ಪಿದರೆ ಸಾವು: ಸದೃಢ ಆರೋಗ್ಯ, ಉತ್ತಮ ಜೀವನ ಶೈಲಿ ಹೊಂದಿರುವವರಲ್ಲೂ ಸೋಂಕು ಹರಡುತ್ತಿರುವುದರಿಂದ ಸರ್ಕಾರ ನೀಡುವ ಪರಿಹಾರಕ್ಕೆ ಕಾಯದೆ ನಮ್ಮ ಆರೋಗ್ಯ ನಮ್ಮದು ಎಂಬ ಎಚ್ಚರ ಮೈಗೂಡಿಸಿಕೊಂಡಲ್ಲಿ ಇಂದಿಲ್ಲ ನಾಳೆ ಕರೊನಾ ಅಟ್ಟಹಾಸ ನಿಲ್ಲಿಸಲಿದೆ. ಎಚ್ಚರ ತಪ್ಪಿಸಿದರೆ ಸಾವು ಖಚಿತ ಎಂಬುದನ್ನು ನೆನಪು ಮಾಡುತ್ತಲೇ ಇದೆ.