ಕೋಲಾರ: ಜಿಲ್ಲೆಯಲ್ಲಿ ಕರೊನಾ ಮಹಾಮಾರಿ ನಾಗಾಲೋಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಭಾನುವಾರ ಒಂದೇ ದಿನ 12 ಪ್ರಕರಣಗಳು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ.
ಕೋಲಾರದಲ್ಲಿ 6, ಮಾಲೂರು ಮತ್ತು ಬಂಗಾರಪೇಟೆಯಲ್ಲಿ ತಲಾ 2 ಪ್ರಕರಣ, ಮುಳಬಾಗಲು ಹಾಗೂ ಶ್ರೀನಿವಾಸಪುರದಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಕೋಲಾರ ಮತ್ತು ಬಂಗಾರಪೇಟೆ ನಿವಾಸಿಗಳಾಗಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೋಂಕು ತಗುಲಿರುವುದು ಆತಂಕ ಹೆಚ್ಚಿಸಿದ್ದು, ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ.
ಸೋಂಕಿತರ ಪ್ರಥಮ ಸಂಪರ್ಕದಲ್ಲಿರುವ 130 ಮಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 126 ಮಂದಿ ಸೇರಿ 209 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇದರೊಂದಿಗೆ 1681 ಮಂದಿ ನಿಗಾವಣೆಯಲ್ಲಿದ್ದಾರೆ.
6 ಮಂದಿ ಬಿಡುಗಡೆ: ಕೋಲಾರದ ಪಿ-8061, ಪಿ-8809 ಹಾಗೂ ಪಿ-8814, ಬಂಗಾರಪೇಟೆಯ ಪಿ -8062 ಹಾಗೂ ಮುಳಬಾಗಿಲಿನ ಪಿ-9234 ಮತ್ತು 6903 ಗುಣವಾಗಿ ಬಿಡುಗಡೆ ಹೊಂದುವುದರೊಂದಿಗೆ ಗುಣಹೊಂದಿದವರ ಸಂಖ್ಯೆ 52ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು 63 ಇವೆ.
ಯುವ ಸಮುದಾಯಕ್ಕೆ ಹೆಚ್ಚು: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪೈಕಿ ಯುವಕ, ಯುವತಿಯರೇ ಹೆಚ್ಚು ಎಂಬುದು ಆತಂಕಕಾರಿ. ಒಟ್ಟು 43 ಸೋಂಕಿತರು 21ರಿಂದ 30 ವರ್ಷದೊಳಗಿನವರು. ಇವರಲ್ಲಿ ಲಾರಿ ಚಾಲಕರಿಂದ ಹಿಡಿದು, ಗೃಹಿಣಿ, ವೈದ್ಯ, ಸ್ನಾತಕೋತ್ತರ, ಆರೋಗ್ಯ ಕಾರ್ಯಕರ್ತೆಯರು ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿದ್ದಾರೆ. ಇವರಲ್ಲಿ 19 ಪುರುಷರು ಹಾಗೂ 19 ಮಂದಿ ಮಹಿಳೆಯರಿದ್ದಾರೆ. ಬಹುತೇಕರಿಗೆ ಅಂತರ ಜಿಲ್ಲೆ, ಹಾಗೂ ಅಂತರ ರಾಜ್ಯ ಪ್ರಯಾಣದ ಸಂದರ್ಭದಲ್ಲಿ ಹಾಗೂ ಸೋಂಕಿತರ ಸಂಪರ್ಕದ ಸಂದರ್ಭದಲ್ಲಿ ಸೋಂಕು ವಕ್ಕರಿಸಿಕೊಂಡಿದೆ.
1 ರಿಂದ 10 ವರ್ಷ ವಯಸ್ಸಿನೊಳಗಿನವರಲ್ಲಿ 2 ವರ್ಷದ ಹೆಣ್ಣು ಮಗು ಹಾಗೂ 9 ವರ್ಷದ ಬಾಲಕಿ ಸೇರಿ ಇಬ್ಬರಿಗೆ ಸೋಂಕು ತಗಲಿತ್ತು. ಇಬ್ಬರೂ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂಬುದು ಸಮಾಧಾನಕರ ಅಂಶ.
ಉಳಿದಂತೆ 11ರಿಂದ 20ರ ವಯಸ್ಸಿನ 7 ಮಂದಿಗೆ ಸೋಂಕು ತಗಲಿದ್ದರೆ, 31ರಿಂದ 40 ವರ್ಷದೊಳಗಿನ 24 ಮಂದಿ, 41 ರಿಂದ 50 ವರ್ಷದೊಳಗಿನ 25 ಮಂದಿ, 51ರಿಂದ 60 ವರ್ಷದೊಳಗಿನ 8 ಜನರಿಗೆ ಸೋಂಕು ತಗುಲಿದೆ.
61 ರಿಂದ 70 ವರ್ಷದೊಳಗಿನ ಇಬ್ಬರಿಗೆ ಸೋಂಕು ಬಂದಿದೆ. ಈ ಪೈಕಿ ಜಿಲ್ಲೆಯಲ್ಲಿ ಜಿಲ್ಲೆಯ 2ನೇ ಕರೊನಾ ರೋಗಿಯಾಗಿದ್ದ ಮುಳಬಾಗಿಲಿನ 70 ವರ್ಷದ ಮಹಿಳೆ ಹಾಗೂ 21ನೇ ರೋಗಿ ಮುಳಬಾಗಿಲಿನ 65 ವರ್ಷದ ಪುರುಷ ಕೂಡ ಗುಣಹೊಂದಿದ್ದಾರೆ.
71 ರಿಂದ 80 ವರ್ಷದೊಳಗಿನವರು 3 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ ಶ್ರೀನಿವಾಸಪುರದ 80 ವರ್ಷದ ಮಹಿಳೆ ಹಾಗೂ 78 ವರ್ಷದ ಪುರುಷ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಾಲೂರಿನ 71 ವರ್ಷದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ.
ಸೋಂಕಿನ ಮೂಲ ನಿಗೂಢ: ಜಿಲ್ಲೆಯಲ್ಲಿ ಮೇ 12ರಂದು ಕರೊನಾ ದೃಢಪಡುವುದರಿಂದ ಹಿಡಿದು ಇದುವರೆಗೆ ದೃಢಪಟ್ಟ ಸೋಂಕಿನ ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ಯಾವ ಮೂಲದಿಂದ ಸೋಂಕು ಹರಡಿತ್ತು ಎಂಬುದು ಪತ್ತೆಯಾಗಿಲ್ಲ. ಇದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಮೂಲ ಪತ್ತೆಯಾಗದ ಸೋಂಕಿತರ ಪೈಕಿ 6 ಮಂದಿ ಕರೊನಾ ಮುಕ್ತರಾಗಿದ್ದಾರೆ.