ಜಿಲ್ಲೆ

ಜಿಲ್ಲೆಯ ನಾಲ್ವರಿಗೆ ಕರೊನಾ ಸೋಂಕು ದೃಢ

Kolar

ಕೋಲಾರ: ಜಿಲ್ಲೆಯಲ್ಲಿ ಗುರುವಾರ ನಾಲ್ಕು ಮಂದಿಗೆ ಕರೊನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

ಕೋಲಾರದಲ್ಲಿ 24 ವರ್ಷದ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ. ನಗರದ ಗಾಂಧಿನಗರದ ನಿವಾಸಿಯಾಗಿರುವ ಈಕೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದರು. ಪ್ರಸ್ತುತ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಮತ್ತೊಬ್ಬ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಕೆಜಿಎಫ್‌ನಲ್ಲಿ 16 ವರ್ಷದ ಬಾಲಕಿಗೆ ಕರೊನಾ ಕಾಣಿಸಿಕೊಂಡಿದ್ದು, ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಶ್ರೀನಿವಾಸಪುರದ 23 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರು ಸೋಂಕಿತರ ಜತೆ ಪ್ರಥಮ ಸಂಪರ್ಕ ಹೊಂದಿದ್ದ 29 ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 16 ಮಂದಿ ಸೇರಿ ಒಟ್ಟು 45 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಗುರುವಾರ ಒಟ್ಟು 376 ಮಾದರಿ ಪರೀಕ್ಷಿಸಲಾಗಿದ್ದು, ಒಟ್ಟು ಪರೀಕ್ಷೆಗೆ ಸಂಗ್ರಹಿಸಿದ ಮಾದರಿಗಳ ಸಂಖ್ಯೆ 10,428. ಈ ಪೈಕಿ 9855 ಮಾದರಿ ನೆಗೆಟಿವ್ ಆಗಿದೆ.