ಕೋಲಾರ: ಜಿಲ್ಲೆಯಲ್ಲಿ ಕರೊನಾ ರಣಕೇಕೆ ತೀವ್ರಗತಿಯಲ್ಲಿ ಸಾಗಿದ್ದು, ಮಂಗಳವಾರವೂ 8 ಮಂದಿಗೆ ಸೋಂಕು ದೃಢಪಡುವುದರೊಂದಿಗೆ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.
ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಕರೊನಾ ಸೋಂಕಿತರ ಸಂಪರ್ಕದ ಪರಿಣಾಮವಾದರೆ, ಒಬ್ಬರಿಗೆ ತೀವ್ರ ಉಸಿರಾಟದ ಪ್ರಕರಣ. ಇನ್ನೂ ನಾಲ್ವರಿಗೆ ಯಾವ ಮೂಲದಿಂದ ಸೋಂಕು ಅಂಟಿತು ಎಂಬುದು ಪತ್ತೆಯಾಗದಿರುವುದು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. 8 ಸೋಂಕಿತರಲ್ಲಿ 5 ಮಹಿಳೆಯರು.
ಮಹಿಳೆ ಪಿ-9538 (23 ವರ್ಷ), ಮಹಿಳೆ ಪಿ-9539 (44 ವರ್ಷ) ಹಾಗೂ ಸೋಂಕಿತರ ಸಂಪರ್ಕದಿಂದ ಪಿ-9540 (33 ವರ್ಷ), ಹಾಗೂ ಪಿ-9542 (23 ವರ್ಷ), ಪಿ-8810ರ ಸಂಪರ್ಕದಿಂದ ಪಿ-9541 (25 ವರ್ಷ) ಪಿ-9543 (35) ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-9544(40) ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಿದ್ದು, ಪಿ-9545 (29) ಇವರಿಗೆ ಸೋಂಕು ಎಲ್ಲಿಂದ ಹರಡಿತು ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಎಲ್ಲ ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್.ಎಲ್. ಜಾಲಪ್ಪ ಆಸ್ಪತ್ರೆಯ ನಾಲ್ವರು ವೈದ್ಯರು ಹಾಗೂ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಹರಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದಲ್ಲಿ ಸೋಂಕಿತನ ಸಂಪರ್ಕದಿಂದ ಕರೊನಾ ಹರಡಿರುವುದು ಒಂದು ಪ್ರಕರಣವಾದರೆ ಇನ್ನೊಂದು ಮುಳಬಾಗಿಲಿನ ಬಂಡಹಳ್ಳಿಯದ್ದಾಗಿದೆ.
42 ಸಕ್ರಿಯ ಪ್ರಕರಣ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 74ಕ್ಕೆ ಏರಿದ್ದು, ಈ ಪೈಕಿ 32 ಮಂದಿ ಗುಣವಾಗಿ ಬಿಡುಗಡೆ ಹೊಂದಿದ್ದಾರೆ. ಉಳಿದಂತೆ 42 ಸಕ್ರಿಯ ಪ್ರಕರಣಗಳಿವೆ.
ಸೋಂಕು ನಿವಾರಣೆ: ಕರೊನಾ ಸೋಂಕು ದೃಢಪಡುವ ಮುನ್ನ ಗ್ರಾಮಕ್ಕೆ ಸೋಂಕಿತೆ ಹಾಗೂ ಕುಟುಂಬದ ಸದಸ್ಯರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ತೊಟ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿ ಸೋಂಕು ನಿವಾರಕ ಸಿಂಪಡಿಸಿದ್ದಾರೆ.