ಜಿಲ್ಲೆ

ನಾಲ್ವರಿಗೆ ಕರೊನಾ ದೃಢ, ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆ

Kolar

ಕೋಲಾರ: ಜಿಲ್ಲೆಯಲ್ಲಿ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಮೂವರು ಸೇರಿ ಶನಿವಾರ ನಾಲ್ಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 56ಕ್ಕೆ ಏರಿಕೆಯಾಗಿದೆ, ಈ ನಡುವೆ ಗರ್ಭಿಣಿ ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ.

ದೆಹಲಿಯಿಂದ ಹಿಂತಿರುಗಿರುವ ಮಹಿಳೆ (43 ವರ್ಷ) ಮತ್ತು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತೆಗೆ (50 ವರ್ಷ) ಚಿಕಿತ್ಸೆ ನೀಡುವ ವೇಳೆ ಪ್ರಾಥಮಿಕ ಸಂಪರ್ಕದಿಂದ ಪಿ-8496 (27) ಮಹಿಳೆ ಪಿ-8497 (26) ಹಾಗೂ ಪಿ-8498 (29 ವರ್ಷ) ಕರೊನಾ ದೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ತೂಕಲ್ ಗ್ರಾಮ ಸೀಲ್‌ಡೌನ್: ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕ್ಯಾಸಂಬಳ್ಳಿ ಹೋಬಳಿಯ ತೂಕಲ್ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಆರು ದಿನಗಳ ಹಿಂದೆ ದೆಹಲಿಯಿಂದ ಯುವತಿ (ಪಿ- 8495) ಬಂದಿದ್ದರು. ಜ್ವರ ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಈಕೆಗೆ ಶನಿವಾರ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತಳನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಂಕಿತೆಯ ಪ್ರಥಮ ಸಂರ್ಪಕದಲ್ಲಿದ್ದ 8 ಮಂದಿಯನ್ನು ಕೆಜಿಎಫ್‌ನ ಸಾಂಕ್ರಾಮಿಕ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ತಹಸೀಲ್ದಾರ್ ರಮೇಶ್ ಹಾಗೂ ತಾಪಂ ಇಒ ರವೀಂದ್ರ ತೂಕಲ್ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮದ 200 ಮೀಟರ್ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಪ್ರದೇಶವಾಗಿ ಘೋಷಿಸಿ ಭದ್ರತೆ ಕೈಗೊಂಡಿದ್ದಾರೆ.

ಗ್ರಾಮದಲ್ಲಿ 7 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿರುವುದರಿಂದ ಅವರಿಗೆ ಕ್ಯಾಸಂಬಳ್ಳಿ ವಸತಿ ನಿಲಯದಲ್ಲಿ ವಸತಿ ಕಲ್ಪಿಸಲು ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಗರ್ಭಿಣಿ ಬಿಡುಗಡೆ: ಕೋಲಾರದ ಪಿ-4863 (40 ವರ್ಷ) ಪಿ-6170 ಹಾಗೂ ಮುಂಬೈ ಪ್ರಯಾಣ ಹಿನ್ನೆಲೆಯಿಂದ ಸೋಂಕಿತನಾಗಿದ್ದ ಬಂಗಾರಪೇಟೆಯ ಪಿ-6175 (25 ವರ್ಷ) ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 32 ಸೋಂಕಿತರು ಗುಣವಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 24ಕ್ಕೆ ಇಳಿಕೆಯಾಗಿದೆ.

ಕೋಲಾರದ ವೇಮಗಲ್ ಹೋಬಳಿಯ ಬೆಟ್ಟಹೊಸಪುರದ ಗರ್ಭಿಣಿ ಪಿ-6170 (22) 13 ದಿನಗಳಲ್ಲೇ ಗುಣಹೊಂದಿ ಮನೆಗೆ ಕಳುಹಿಸಿರುವ ವೈದ್ಯರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.

ಮೂವರಿಗೆ ಶಂಕೆ?: ಕೋಲಾರದಲ್ಲಿ ಮತ್ತೆ ಮೂವರಲ್ಲಿ ಕರೊನಾ ಶಂಕೆ ವ್ಯಕ್ತವಾಗಿದೆ. ಕೋಲಾರ ನಗರದ 31 ವರ್ಷದ ವ್ಯಕ್ತಿಗೆ ಹಾಗೂ ಬಂಗಾರಪೇಟೆ ಪಟ್ಟಣಕ್ಕೆ ಬೆಂಗಳೂರಿನಿಂದ ಬಂದಿದ್ದ 19 ವರ್ಷದ ಯುವಕ ಹಾಗೂ 26 ವರ್ಷದ ಯುವತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.