ಜಿಲ್ಲೆ

ತಿಂಗಳಲ್ಲಿ 41ಕ್ಕೇರಿದ ಸೋಂಕಿತರ ಸಂಖ್ಯೆ,  26 ಸೋಂಕಿತರು ಗುಣಮುಖ

Kolar

ಕೋಲಾರ: ಜಿಲ್ಲೆಯಲ್ಲಿ ಕರೊನಾ ಕಾಣಿಸಿಕೊಂಡ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 41 ಮಂದಿಗೆ ಸೋಂಕು ದೃಢಪಟ್ಟಿದ್ದು, 26 ಸೋಂಕಿತರು ಗುಣಮುಖರಾಗಿರುವುದರಿಂದ 15 ಸಕ್ರೀಯ ಪ್ರಕರಣಗಳಿವೆ.

ಲಾಕ್‌ಡೌನ್ ಸಡಿಲಿಕೆಯ ನಂತರ ಮುಳಬಾಗಿಲಿಗೆ ಒರಿಸ್ಸಾದಿಂದ ವಾಪಸಾಗಿರುವ ಇಬ್ಬರು ಲಾರಿ ಚಾಲಕರು, ಬೀದರ್‌ನಿಂದ ಬಂದಿದ್ದ ಓರ್ವ ವಿದ್ಯಾರ್ಥಿನಿ, ಬೆಂಗಳೂರಿನ ಜೆಪಿ ನಗರದಲ್ಲಿ ಮನೆಕೆಲಸ ಮಾಡುತ್ತಿದ್ದ 70 ವರ್ಷದ ವೃದ್ಧೆ ಹಾಗೂ ಚೆನ್ನೈನಿಂದ ಬಂದಿದ್ದ ವ್ಯಕ್ತಿ ಸೇರಿ ಒಟ್ಟು 5 ಜನರಿಗೆ ಮೇ 12ರಂದು ಸೋಂಕು ದೃಢಪಡುವುದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಖಾತೆ ಆರಂಭಿಸಿತ್ತು.

ಮೇ 12ರಿಂದ ಜೂ.13ರ ಅವಧಿಯಲ್ಲಿ ಒಟ್ಟು 41 ಮಂದಿಗೆ ಕರೊನಾ ದೃಢಪಟ್ಟಿದೆ. ಈ ಪೈಕಿ ಕೋಲಾರ 8, ಮಾಲೂರು 3, ಬಂಗಾರಪೇಟೆ 10, ಕೆಜಿಎಫ್ 4, ಮುಳಬಾಗಿಲು 10 ಹಾಗೂ ಶ್ರೀನಿವಾಸಪುರ 6 ಸೇರಿ ಒಟ್ಟು 41 ಮಂದಿಗೆ ಸೋಂಕು ದೃಢಪಟ್ಟಿದೆ. ಬಂಗಾರಪೇಟೆಯ 2 ವರ್ಷ ಮಗು, 9 ವರ್ಷದ ಬಾಲಕಿ ಸೇರಿ ಒಟ್ಟು 14 ಮಹಿಳೆಯರು ಸೋಂಕಿತರಾಗಿದ್ದು, ಉಳಿದ 27 ಸೋಂಕಿತರು ಪುರುಷರು.

15 ಸಕ್ರೀಯ ಪ್ರಕರಣ: ಸೋಂಕಿತರ ಪೈಕಿ ಕೋಲಾರ 3, ಮಾಲೂರು 2, ಬಂಗಾರಪೇಟೆ 7, ಕೆಜಿಎಫ್ 3, ಮುಳಬಾಗಿಲು 10 ಹಾಗೂ ಶ್ರೀನಿವಾಸಪುರದ ಓರ್ವ ಸೇರಿ 26 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶನಿವಾರ ಮುಳಬಾಗಿಲು ಕರೊನಾ ಮುಕ್ತವಾಗಿದೆ. ಉಳಿದಂತೆ ಕೋಲಾರದಲ್ಲಿ 5, ಬಂಗಾರಪೇಟೆ 3, ಕೆಜಿಎಫ್ 1 ಹಾಗೂ ಶ್ರೀನಿವಾಸಪುರದಲ್ಲಿ 5 ಸಕ್ರೀಯ ಪ್ರಕರಣಗಳಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 15 ಕ್ಕೇರಿದೆ.

ಶುಕ್ರವಾರ ರಾತ್ರಿ ಹಾಗೂ ಶನಿವಾರ ದೃಢಪಟ್ಟ ಒಟ್ಟು 4 ಪ್ರಕರಣಗಳಲ್ಲಿ ಪ್ರಥಮ ಸಂಪರ್ಕ ಹೊಂದಿರುವ 21 ಹಾಗೂ ದ್ವಿತೀಯ ಸಂಪರ್ಕಿತರು ಐದು ಮಂದಿ ಸೇರಿ 26 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 892 ಮಂದಿ ನಿಗಾದಲ್ಲಿದ್ದಾರೆ.

ಶನಿವಾರ 122 ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದ್ದು, ಒಟ್ಟು ಪರೀಕ್ಷಿಸಿದ 8654 ಮಾದರಿಗಳಲ್ಲಿ ಶನಿವಾರ ನೆಗೆಟಿವ್ ವರದಿಯಾದ 293 ಮಾದರಿಗಳು ಸೇರಿ ಒಟ್ಟು 8453 ಮಾದರಿಗಳು ನೆಗೆಟಿವ್ ಬಂದಿದೆ.

ಮಾಲೂರು ವರದಿ: ಹೊರ ರಾಜ್ಯದಿಂದ ಮಾಲೂರು ಪಟ್ಟಣಕ್ಕೆ ಬಂದಿರುವ ಖಾಸಗಿ ಕಂಪನಿಯ ನೌಕರ (36ವರ್ಷ) ಕರೊನಾ ದೃಢಪಟ್ಟಿದೆ. ಈತ ಪಟ್ಟಣದ ಸೋಮಣ್ಣ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ. ಸೋಂಕಿತ ವ್ಯಕ್ತಿಯನ್ನು ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.