ಕೋಲಾರ: ಕರೊನಾ ಮಹಾಮಾರಿಯಿಂದ ಜಿಲ್ಲಾ ಎಸ್‌ಎಸ್‌ಆರ್ ಆಸ್ಪತ್ರೆಯ ಕೋವಿಡ್-19 ವಾರ್ಡಿಗೆ ದಾಖಲಾಗಿದ್ದ ಮುಳಬಾಗಿಲಿನ ಐವರು ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಫಲಪುಷ್ಪ ನೀಡಿ ಶುಭ ಕೋರಿದರು.
ಜಿಲ್ಲಾ ಆಸ್ಪತ್ರೆ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯವಿದೆ, ಆದರೆ ಕರೊನಾದಿಂದ ಬಳಲಿದ್ದ ನಮ್ಮನ್ನು ರಕ್ಷಣೆ ಮಾಡಿರುವ ಇಲ್ಲಿನ ವೈದ್ಯರು ನಮ್ಮ ಪಾಲಿಗೆ ನಿಜವಾದ ದೇವರು ಎಂದು ಹರ್ಷ ವ್ಯಕ್ತಪಡಿಸಿದರು.
ಈ ಮೊದಲು ನಮ್ಮನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಧಿಕಾರಿ ಸರ್ಕಾರಿ ಆಸ್ಪತ್ರೆಯಲ್ಲೇ ಉತ್ತಮ ಚಿಕಿತ್ಸೆ ನೀಡುವ ಭರವಸೆಯೊಂದಿಗೆ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರು. ನಮಗೆ ಇಲ್ಲಿ ಯಾವುದೇ ತೊಂದರೆ, ಕೊರತೆ ಕಾಣಲಿಲ್ಲ ಎಂದು ಧನ್ಯತೆ ತೋರಿದರು. ಬಿಡುಗಡೆಯಾದವರಲ್ಲಿ ಒಬ್ಬರು 70 ವರ್ಷದ ಮಹಿಳೆ, ವಿದ್ಯಾರ್ಥಿನಿ ಹಾಗೂ ಮೂವರು ಲಾರಿ ಚಾಲಕರಾಗಿದ್ದಾರೆ.
ಸಚಿವ ಎಚ್.ನಾಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಮುಳಬಾಗಿಲಿನ ಐವರಿಗೆ ಪಾಸಿಟಿವ್ ಕಂಡುಬಂದಿತ್ತು. ಇವರು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಕೋಲಾರಕ್ಕೆ ಆಗಮಿಸಿದ್ದರು. ಇವರಿಗೆ ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆ ಆರಂಭಿಸಲಾಯಿತು. ಈಗ ಇವರೆಲ್ಲರೂ ಗುಣಮುಖರಾಗಿದ್ದು, ಇವರ ಗಂಟಲು ದ್ರವ ಪರೀಕ್ಷಿಸಿ ನೆಗೆಟಿವ್ ಬಂದಿದ್ದರಿಂದ ಬಿಡುಗಡೆ ಮಾಡಲಾಗಿದೆ ಎಂದರು.
ಕರೊನಾಗೆ ಯಾರೂ ಆತಂಕಪಡಬಾರದು. ಮುನ್ನೆಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ 19 ಪ್ರಕರಣ ಕಂಡು ಬಂದಿದ್ದವು. ಈಗ 5 ಜನ ಬಿಡುಗಡೆ ಆಗಿರುವುದರಿಂದ 14 ಸಕ್ರಿಯ ಪ್ರಕರಣಗಳಿವೆ ಎಂದರು.
ಪಿ-906 ವಿದ್ಯಾರ್ಥಿನಿಯಾಗಿದ್ದು ಬೀದರ್ ಜಿಲ್ಲೆಯಿಂದ ಮುಳಬಾಗಿಲು ತಾಲೂಕಿನ ವಿ.ಹೊಸಹಳ್ಳಿಗೆ ಬಂದಿದ್ದರು, ಪಿ-907 , 70 ವರ್ಷದ ವೃದ್ಧೆ, ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡಿದ್ದು ತನ್ನ ಊರಾದ ಬೂಸಲುಕುಂಟೆಗೆ ಬಂದು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾಗ ಸೋಂಕು ದೃಢಪಟ್ಟಿತ್ತು. ಪಿ.908 ಲಾರಿ ಚಾಲಕ ಚೆನ್ನೈನಿಂದ ಬೈರಸಂದ್ರಕ್ಕೆ, ಪಿ-909 ಮತ್ತು ಪಿ-910 ಲಾರಿ ಚಾಲಕರಾಗಿದ್ದು, ಒಡಿಶಾದಿಂದ ಬಾಲಿಗಾನಹಳ್ಳಿಗೆ ಬಂದಿದ್ದ ವೇಳೆ ಸೋಂಕು ಕಂಡು ಬಂದಿತ್ತು. ಇವರನ್ನು ಮೇ 12ರಂದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಎಎಸ್ಪಿ ಜಾಹ್ನವಿ, ಉಪವಿಭಾಗಾಧಿಕಾರಿ ಸೋಮಶೇಖರ್, ಡಿಎಚ್‌ಒ ಡಾ.ಎಸ್.ಎನ್.ವಿಜಯ್ ಕುಮಾರ್, ಜಿಲ್ಲಾ ಸರ್ಜನ್ ಡಾ.ಎಸ್.ಜಿ. ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ತಾಲೂಕು ವೈದ್ಯಾಧಿಕಾರಿ ಡಾ. ರಮ್ಯದೀಪಿಕ, ಜಿಪಂ ಸದಸ್ಯ ಅರುಣ್ ಪ್ರಸಾದ್, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಶಾಖೆಯ ತಂತ್ರಜ್ಞ ನಂದೀಶ್, ಬಿಜೆಪಿ ಮುಖಂಡ ಓಂಶಕ್ತಿ ಚಲಪತಿ ಉಪಸ್ಥಿತರಿದ್ದರು.