ಕೋಲಾರ: ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ವೇಳೆಗೆ ಕರೊನಾ ಸೋಂಕಿತರ ಸಂಖ್ಯೆ 2000 ದಾಟುವ ನಿರೀಕ್ಷೆ ಇರುವುದರಿಂದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧತೆ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಉಪನಿರ್ದೇಶಕರೂ ಆಗಿರುವ ಕೋವಿಡ್ 19 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಚಂದ್ರಕಲಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆ, ಕೆಜಿಎಫ್ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಶುಕ್ರವಾರ ಭೇಟಿ ನೀಡಿ ಕರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಈಗಾಗಲೇ 200 ಹಾಸಿಗೆಗಳನ್ನು ಸಿದ್ಧಪಡಿಸಿ ಇದರಲ್ಲಿ 90 ಹಾಸಿಗೆಗಳು ಕರೊನಾ ಶಂಕಿತರಿಗೆ, 70 ಹಾಸಿಗೆ ಸೋಂಕಿತರಿಗೆ, 40 ಹಾಸಿಗೆಗಳ ಐಸಿಯು ವಾರ್ಡ್‌ನಲ್ಲಿ 10 ವೆಂಟಿಲೇಟರ್‌ಒಳಗೊಂಡ ಹಾಸಿಗೆಗಳನ್ನು ಸಿದ್ಧಪಡಿಸಲು ಸೂಚಿಸಿದರಲ್ಲದೆ ಉಳಿದ 30 ಹಾಸಿಗೆಗಳನ್ನು ಐಸಿಯು ಘಟಕದಲ್ಲಿ ತುರ್ತು ನಿರ್ವಹಣೆಗಾಗಿ ಮೀಸಲಿಡಬೇಕು ಎಂದರು.
ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆಯಲ್ಲ ಎಂಬುದನ್ನು ಸಾಬೀತು ಮಾಡೋಣ, ಕರೊನಾ ನಿಯಂತ್ರಿಸಲು ಜಿಲ್ಲಾಸ್ಪತ್ರೆಯಾಗಿ ಜವಾಬ್ದಾರಿ ಹೊರುವುದು ಅನಿವಾರ್ಯ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ, ಕರೊನಾ ರೋಗಿಗಳ ವಾರ್ಡ್ ಪ್ರತ್ಯೇಕವಾಗಿ ನಿರ್ವಹಿಸಬೇಕು, ಇತರ ರೋಗಿಗಳು ಕರೊನಾ ವಾರ್ಡ್‌ಗಳತ್ತ ಸುಳಿಯದಂತೆ ಕ್ರಮ ಕೈಗೊಳ್ಳುವ ಜತೆಗೆ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲು ಕ್ರಮ ವಹಿಸೋಣ ಎಂದು ಹೇಳಿದರು.
ಕೋವಿಡ್ ವಾರ್ಡ್‌ನಲ್ಲಿ ಸಿದ್ಧಗೊಂಡಿರುವ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಡಿಎಚ್‌ಒ ಡಾ. ಎಸ್.ಎನ್. ವಿಜಯಕುಮಾರ್ ಹಾಗೂ ಜಿಲ್ಲಾ ಸರ್ಜನ್ ಡಾ.ಎಸ್.ಜಿ. ನಾರಾಯಣಸ್ವಾಮಿ ವಿವರಿಸಿ, ಜಿಲ್ಲಾಸ್ಪತ್ರೆಗೆ ದಾಖಲಾಗುವ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ವೈದ್ಯರ ತಂಡ ಸಜ್ಜುಗೊಳಿಸಲಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ.ಶ್ರೀಧರ್ ಕರೊನಾ ಸಂಬಂಧಿತ ಚಿಕಿತ್ಸೆಗೆ ಆಸ್ಪತ್ರೆಯಲ್ಲಿನ ಸೌಲಭ್ಯ ಮೇಲ್ದರ್ಜೆಗೇರಿಸಿಕೊಳ್ಳಲು ಸೂಕ್ತ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಮಲಾ, ಸರ್ವೇಕ್ಷಣಾಧಿಕಾರಿ ಡಾ. ಚಾರಿಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ರಮ್ಯ ದೀಪಿಕಾ, ಆರ್‌ಸಿಎಚ್ ಅಧಿಕಾರಿ ಡಾ.ಚಂದನ್ ಉಪಸ್ಥಿತರಿದ್ದರು.
ಈಗಾಗಲೆ ಜಿಲ್ಲಾಸ್ಪತ್ರೆಯಲ್ಲಿ ಮೂರು ವೆಂಟಿಲೇಟರ್ ಸಿದ್ಧಪಡಿಸಲಾಗಿದೆ. ಸರ್ಕಾರದಿಂದ 3 ವೆಂಟಿಲೇಟರ್ ಸರಬರಾಜಾಗಿದೆ. ಉಳಿದ 4 ವೆಂಟಿಲೇಟರ್ ಖರೀದಿಸಲು ಅನುದಾನ ಒದಗಿಸಲಾಗುವುದು. ಸಿ. ಸತ್ಯಭಾಮ, ಜಿಲ್ಲಾಧಿಕಾರಿ