ಜಿಲ್ಲೆ

ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಗೆ ಕರೊನಾ ಸೋಂಕಿತರು ಸ್ಥಳಾಂತರಕ್ಕೆ ಚಿಂತನೆ, ಗುಣಮಟ್ಟದ ಚಿಕಿತ್ಸೆಗೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ

Kolar

ಕೋಲಾರ: ಜಿಲ್ಲೆಯಲ್ಲಿ ಪತ್ತೆಯಾಗುವ ಕರೊನಾ ಸೋಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲೇ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳಿಗಿಂತ ನಾವೇನೂ ಕಡಿಮೆಯಿಲ್ಲ ಎಂಬುದನ್ನು ಸಾಬೀತು ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು.

ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ವೈದ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮುಳಬಾಗಿಲಿನ ಐವರು ಸೋಂಕಿತರನ್ನು ಕಾರಣಾಂತರಗಳಿಂದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಒಂದು ವೇಳೆ ಬೇರೆ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್-19ಗೆ ಸಂಬಂಧಿಸಿದ ರೋಗಿಗಳು ಬಂದರೂ ಎದೆಗುಂದದೆ ಚಿಕಿತ್ಸೆ ನೀಡುವ ಮೂಲಕ ಸರ್ಕಾರಿ ಆಸ್ಪತ್ರೆ ಮೇಲೆ ಜನತೆಯಲ್ಲಿ ವಿಶ್ವಾಸ ಮೂಡುವಂತೆ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.

ಕೋವಿಡ್ ಪ್ರಕರಣ ನಿಭಾಯಿಸುವ ಸಲುವಾಗಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಆಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ. ವೈದ್ಯರು ಮತ್ತು ಸಿಬ್ಬಂದಿ ಭಯಪಡುವ ಅಗತ್ಯವಿಲ್ಲ. ಉತ್ತಮ ರ‌್ಯಾಂಕ್ ಹೊಂದಿರುವ ವೈದ್ಯರು ಇಲ್ಲಿರುವುದು ಸೌಭಾಗ್ಯ, ಸೋಂಕಿತರನ್ನು ಗುಣಮುಖರನ್ನಾಗಿಸಿ ಅವರು ನೆಮ್ಮದಿ ಮತ್ತು ಸಂತೋಷದಿಂದ ಮನೆಗೆ ತೆರಳುವಂತೆ ಮಾಡಿ ಎಂದು ಹುರಿದುಂಬಿಸಿದರು.

ಕೋವಿಡ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸುವ ವೈದ್ಯರು, ಸಿಬ್ಬಂದಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿ, ರೋಗಿಗಳು ವಾರ್ಡ್‌ನಿಂದ ಹೊರ ಬರದಂತೆ ನೋಡಿಕೊಳ್ಳಿ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿಗೆ ತಿಳಿಸಿದರು.

ರಾಜ್ಯದಲ್ಲಿ 1 ಆಸ್ಪತ್ರೆಯಾಗಲಿ: ಜಿಲ್ಲಾಸ್ಪತ್ರೆಯಲ್ಲಿ ಅನೇಕ ವೈದ್ಯರು, ಸಿಬ್ಬಂದಿ ಹುದ್ದೆ ಖಾಲಿ ಇರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ, ಅವುಗಳನ್ನು ಭರ್ತಿ ಮಾಡಿಕೊಳ್ಳಲು ಬೇಕಾದ ಪ್ರಕ್ರಿಯೆ ಕೈಗೊಳ್ಳಿ, ನೇಮಕಾತಿಗೆ ಅನುಮೋದನೆ ನೀಡುವೆ ಎಂದು ಡಿಸಿ ತಾಕೀತು ಮಾಡಿದರು.

ಸಭೆಗೂ ಮುನ್ನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎನ್‌ಐಸಿಯು ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ ಅವರು, ಆಸ್ಪತ್ರೆಯ ಹೊರಗೆ ಸಾಮಾಜಿಕ ಅಂತರವಿಲ್ಲದೆ ಕುಳಿತಿದ್ದ ಜನರಿಗೆ ಬುದ್ಧಿವಾದ ಹೇಳಿದರು.

ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ ಆಸ್ಪತ್ರೆ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು, ಡಿಎಚ್‌ಒ ಡಾ.ಎಸ್.ಎನ್.ವಿಜಯ್‌ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಕುಟುಂಬ ಕಲ್ಯಾಣಾಧಿಕಾರಿ ಡಾ. ಭಾರತಿ ಹಾಗೂ ಇತರ ವೈದ್ಯರು ಉಪಸ್ಥಿತರಿದ್ದರು.

ಸೌಕರ್ಯ ಒದಗಿಸುವ ಭರವಸೆ: ಕರೊನಾ ಸೋಂಕಿತರಿಗೆ ಗುಣಮಟ್ಟದ ಔಷಧ, ಆರೈಕೆ ಜತೆಗೆ ಆಸ್ಪತ್ರೆಯಲ್ಲಿ ಇರುವಷ್ಟು ದಿನ ಒಳ್ಳೆಯ ತಿಂಡಿ. ಊಟ, ಪ್ರತಿದಿನ ಮೊಟ್ಟೆ ನೀಡಿ, ರೋಗಿಗಳಿಗೆ ಬೇಕಾದ ಸೌಕರ್ಯ ಒದಗಿಸಲು ಸಿಆರ್‌ಎಫ್ ನಿಧಿಯಡಿ ಹಣ ಒದಗಿಸಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ಒತ್ತಡದ ಹಿನ್ನೆಲೆಯಲ್ಲಿ ಸ್ಥಳಾಂತರ: ಮುಳಬಾಗಿಲು ತಾಲೂಕಿನ ಐವರು ಸೋಂಕಿತರನ್ನು ಮೇ 12ರಂದು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಸದರಿ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧಾರಕ್ಕೆ ಅಲ್ಲಿನ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಆಕ್ಷೇಪ ವ್ಯಕ್ತಪಡಿಸಿ ಸೋಂಕಿತರನ್ನು ವಾಪಸ್ ಕಳುಹಿಸುವಂತೆ ಜಿಲ್ಲಾ ಆಡಳಿತದ ಮೇಲೆ ಒತ್ತಡ ತಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಸೋಂಕಿತರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಕಾರಣ ಎನ್ನಲಾಗಿದೆ.