ಜಿಲ್ಲೆ

ಕೋಲಾರ ಜಿಲ್ಲೆಗೆ ಆತಂಕ ಸೃಷ್ಟಿಸಿದ ವಲಸಿಗರು, ಊರಿಗೆ ದೌಡಾಯಿಸಲು ವಾಮಮಾರ್ಗ

Kolar

ಕೋಲಾರ: ದುಡಿಮೆಗಾಗಿ ಹೊರ ರಾಜ್ಯಗಳಿಂದ ವಲಸೆ ಬಂದಿದ್ದ ಸಾವಿರಾರು ಕಾರ್ಮಿಕರು ಲಾಕ್‌ಡೌನ್ ಸಡಿಲಿಕೆ ನಂತರ ತಮ್ಮ ತಮ್ಮ ಊರಿಗೆ ದೌಡಾಯಿಸಲು ವಾಮಮಾರ್ಗ ಹುಡುಕಿಕೊಂಡಿರುವುದು ಜಿಲ್ಲಾಡಳಿತಕ್ಕೆ ಸಂಕಷ್ಟವನ್ನುಂಟು ಮಾಡಿದೆ.

ಕರೊನಾ ತಡೆಗಟ್ಟುವಲ್ಲಿ ಯಶಸ್ಸು ಸಾಧಿಸಿರುವ ಜಿಲ್ಲಾಡಳಿತ ಕಡೆಯವರೆಗೂ ಜಿಲ್ಲೆಯನ್ನು ಹಸಿರು ವಲಯವಾಗಿ ಉಳಿಸಿಕೊಳ್ಳುವ ಮಹದಾಸೆ ಹೊಂದಿದೆ. ಇದಕ್ಕಾಗಿ ಚೆಕ್ ಪೋಸ್ಟ್‌ಗಳಲ್ಲಿ ಬಂದೋಬಸ್ತ್ ಮಾಡಿದೆ. ಆದರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಉಳಿದುಕೊಂಡಿದ್ದ ವಲಸಿಗರು ಜಿಲ್ಲೆಯ ಗಡಿ ದಾಟಲು ಯತ್ನಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿದೆ.

ವಲಸಿಗರಿಗೆ ರಾಜ್ಯದಲ್ಲೇ ಕೆಲಸ ಮುಂದುವರಿಸಲು ಅವಕಾಶ ಕಲ್ಪಿಸುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಭಯ ನೀಡಿ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಹೊರ ರಾಜ್ಯಗಳ ಕೂಲಿ ಕಾರ್ಮಿಕರು, ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಇಷ್ಟು ದಿನ ಆಶ್ರಯ ಮತ್ತು ಎಲ್ಲ ಸವಲತ್ತು ಪಡೆದು ಈಗ ಏಕಾಏಕಿ ಜಾಗ ಖಾಲಿ ಮಾಡುತ್ತಿರುವುದರ ಹಿಂದೆ ಕಾಣದ ಕೈಗಳ ಕುತಂತ್ರದ ಜತೆಗೆ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಇರಬಹುದೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಜಿಲ್ಲೆಯಲ್ಲಿ ಕರೊನಾ ಹೆಮ್ಮಾರಿ ನುಸುಳದಂತೆ ತಡೆಯಲು 20 ಚೆಕ್‌ಪೋಸ್ಟ್ ತೆರೆದಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಿದ್ದರೂ ರಾತ್ರಿ ಗಡಿ ದಾಟುತ್ತಿರುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ನಾಲ್ಕು ದಿನಗಳ ಅವಧಿಯಲ್ಲಿ ಜಿಲ್ಲಾಡಳಿತ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಸಾವಿರಾರು ವಲಸಿಗರನ್ನು ವ್ಯವಸ್ಥಿತವಾಗಿ ತವರೂರಿಗೆ ರೈಲು ಮತ್ತು ಬಸ್‌ಗಳ ಮೂಲಕ ಕಳುಹಿಸಿಕೊಟ್ಟಿದೆ. ಅಕ್ರಮವಾಗಿ ನುಸುಳಿದ ವಲಸಿಗರನ್ನು ತಡೆದು ಬುದ್ಧಿ ಹೇಳಿ ಊಟ, ತಿಂಡಿ ಜತೆಗೆ ತಾತ್ಕಾಲಿಕ ಆಶ್ರಯ ನೀಡಿ ಕಾನೂನು ಪ್ರಕಾರ ಸಾರಿಗೆ ವ್ಯವಸ್ಥೆಯೊಂದಿಗೆ ವಾಪಸ್ ಕಳುಹಿಸುತ್ತಿದೆ. ಈ ಕೆಲಸವನ್ನು ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಇನ್ನಿತರ ಜಿಲ್ಲೆಯ ಆಡಳಿತಗಾರರು ಅಲ್ಲಿಂದಲೇ ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು ಕೋಲಾರ ಗಡಿ ಮೂಲಕ ಹಾದು ಹೋಗಲು ಏಕೆ ಅವಕಾಶ ಕಲ್ಪಿಸಿದ್ದಾರೆಂಬ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.

ವಲಸಿಗರ ಕಾರುಬಾರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಜಿಲ್ಲಾಧಿಕಾರಿ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕರೊನಾ ನೋಡಲ್ ಅಧಿಕಾರಿಗಳಿಗೆ ಮತ್ತು ಸೇನಾನಿಗಳಿಗೆ ಸೂಚನೆ ನೀಡಿದ್ದಾರೆ. ಆಂಧ್ರ ಮತ್ತು ತಮಿಳುನಾಡು ಗಡಿಭಾಗದಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರ ಹಸಿರು ವಲಯಕ್ಕೆ ಸೇರಿದ ಕೋಲಾರ ಜಿಲ್ಲೆಯನ್ನು ಕರೊನಾದಿಂದ ಕಾಪಾಡುವ ಸಲುವಾಗಿ ವಲಸಿಗರನ್ನು ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರ ಕೋಲಾರ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಯನ್ನು ಒಳಗೊಂಡಂತೆ ಒಂದು ಕ್ಲಸ್ಟರ್ ಮಾಡಿರುವುದರಿಂದ ಗುರುತಿನ ಚೀಟಿ ಹೊಂದಿರುವವರು ಯಾರು ಬೇಕಾದರೂ ಈ ವ್ಯಾಪ್ತಿಯಲ್ಲಿ ಓಡಾಡಲು ಅವಕಾಶವಿದೆ. ವಲಸಿಗರು ಊರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದ್ದು ಕೋಲಾರದ ಮೂಲಕ ಬೇರೆಡೆಗೆ ಹಾದು ಹೋಗುವವರನ್ನು ತಡೆದು ಪರಿಶೀಲಿಸಿ ಕಳುಹಿಸಲಾಗುತ್ತಿದೆ. ಅಕ್ರಮವಾಗಿ ನುಸುಳಲು ಅವಕಾಶ ನೀಡುವುದಿಲ್ಲ, ಜಿಲ್ಲಾಧಿಕಾರಿ ಪ್ರತಿ ಬೆಳವಣಿಗೆಯನ್ನು ಜಾಗ್ರತೆಯಿಂದ ನಿಭಾಯಿಸುತ್ತಿದ್ದಾರೆ. ಬಿ.ಶಿವಸ್ವಾಮಿ, ಅಪರ ಜಿಲ್ಲಾಧಿಕಾರಿ, ಕೋಲಾರ