ಜಿಲ್ಲೆ

ಹೊರ ರಾಜ್ಯಗಳಿಂದ ಆಗಮಿಸಿದ್ದ 3 ಸಾವಿರ ಕಾರ್ಮಿಕರು ತವರಿನತ್ತ

Kolar

ಮಾಲೂರು: ಹೊರ ರಾಜ್ಯಗಳಿಂದ ಆಗಮಿಸಿದ್ದ ಕಾರ್ಮಿಕರನ್ನು ತವರು ಗ್ರಾಮಗಳಿಗೆ ಕಳುಹಿಸಲು ಸರ್ಕಾರ ಮುಂದಾಗಿದ್ದು, ಭಾನುವಾರ ಸಂಜೆ 7ರ ನಂತರ 3 ರೈಲುಗಳಲ್ಲಿ ತಲಾ 1,200ರಂತೆ 3,600 ಕಾರ್ಮಿಕರು ಹೊರ ರಾಜ್ಯಗಳಿಗೆ ತೆರಳಿದರು.

ಊರಿಗೆ ತೆರಳಲು ನೋಂದಣಿ ಮಾಡಿಕೊಂಡಿರುವ 3 ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಬೆಂಗಳೂರಿನಿಂದ ಬಿಎಂಟಿಸಿ ಬಸ್‌ಗಳ ಮೂಲಕ ಮಾಲೂರು ರೈಲ್ವೆ ನಿಲ್ದಾಣಕ್ಕೆ ಸ್ಥಳಾಂತರಿಸಿ 3 ರೈಲುಗಳಲ್ಲಿ ಹೋಗಲು ರಾಜ್ಯ ಸರ್ಕಾರ ವ್ಯವಸ್ಥೆ ಕಲ್ಪಿಸಿತ್ತು.

ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರದಿಂದ ಕೆಲಸಕ್ಕಾಗಿ ಆಗಮಿಸಿ ಬೆಂಗಳೂರಿನ ವೈಟ್‌ಫೀಲ್ಡ್, ಸರ್ಜಾಪುರ, ಕೋಲಾರ ಸೇರಿ ಹಲವಾರು ಭಾಗಗಳಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಲಾಕ್‌ಡೌನ್ ಆದ ನಂತರ ಗ್ರಾಮಗಳಿಗೆ ತೆರಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದರು.

ಮಾಲೂರು ತಾಲೂಕಿನ ಹಲವು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೂ ಸಹ ತಮ್ಮ ರಾಜ್ಯಗಳಿಗೆ ಹೋಗಲು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಪಟ್ಟಣ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಮೊದಲು ನೋಂದಣಿ ಮಾಡಿಸಿಕೊಂಡರೆ ನಂತರ ಕಳುಹಿಸಲಾಗುವುದು ಎಂದು ಹೇಳಿ ವಾಪಸ್ ಕಳುಹಿಸಿದರು.

ಬೆಂಗಳೂರು ದಕ್ಷಿಣ ವಲಯ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಎಸ್ಪಿ ಕಾರ್ತಿಕ್‌ರೆಡ್ಡಿ, ಎಎಸ್ಪಿ ಜಾಹ್ನವಿ, ಡಿವೈಎಸ್‌ಪಿ ಚೌಡಪ್ಪ, ಸಿಪಿಐ ನಾಗರಾಜ್ ಸೇರಿ ಹಲವು ಅಧಿಕಾರಿಗಳು ಹಾಜರಿದ್ದರು.