ಜಿಲ್ಲೆ

ಗುಜರಾತಿನಿಂದ ಕೋಲಾರಕ್ಕೆ ಬಂದವರು ಕ್ವಾರಂಟೈನ್‌ಗೆ

Kolar

ಮಾಲೂರು/ಮಡಿವಾಳ: ಮಾಲೂರು ತಾಲೂಕಿನಿಂದ ಗುಜರಾತ್‌ನ ಸೂರತ್‌ಗೆ ಜಮಾಯತ್‌ಗಾಗಿ (ಧರ್ಮಪ್ರಚಾರಕ್ಕೆ) ಹೋಗಿ ಭಾನುವಾರ ಬೆಳಗ್ಗೆ 4 ಗಂಟೆಗೆ ವಾಪಸ್ ಬಂದ 44 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ತಹಸೀಲ್ದಾರ್ ಎಂ.ಮಂಜುನಾಥ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಿಂದ 44 ಮಂದಿ ಸೂರತ್‌ಗೆ ಹೋಗಿದ್ದಾಗ ಲಾಕ್‌ಡೌನ್ ಆದ ಕಾರಣ ಅಲ್ಲೇ ಉಳಿದುಕೊಂಡಿದ್ದರು. ಊರಿಗೆ ತೆರಳಲು ಸಾಧ್ಯವಾಗದವರಿಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟ ಕಾರಣ ಭಾನುವಾರ ಮಾಲೂರು ಹೊಸಕೋಟೆ ಗಡಿಭಾಗ ಕಟ್ಟಿಗೇನಹಳ್ಳಿ ಬಳಿ ಬಸ್‌ನಲ್ಲಿ ಮರಳಿ ಊರಿಗೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.

ವೈದ್ಯಾಧಿಕಾರಿಗಳು 44 ಮಂದಿಯನ್ನೂ ಪರೀಕ್ಷಿಸಿ ರಾಜೇನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ರ‌್ಯಾಪಿಡ್ ಟೆಸ್ಟ್ ಕಿಟ್ ಮೂಲಕ ಅವರ ರಕ್ತದ ಮಾದರಿ ಪರೀಕ್ಷಿಸಿದಾಗ ನೆಗೆಟಿವ್ ಬಂದಿದ್ದು, ಗಂಟಲು ದ್ರವ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಈ ಎಲ್ಲರನ್ನು 28 ದಿನ ಕ್ವಾರಂಟೈನ್‌ನಲ್ಲಿ ಇಡಲಾಗುವುದು ಹಾಗೂ ಬಂದೋಬಸ್ತ್ ಒದಗಿಸಲಾಗಿದೆ. ಗ್ರಾಪಂನಿಂದ ಕಟಿಗೇನಹಳ್ಳಿ ಗೇಟ್ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಔಷಧ ಸಿಂಪಡಣೆ ಮಾಡಲಾಗಿದೆ ಎಂದರು.

ಕೋಲಾರ ವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಜಯ್‌ಕುಮಾರ್, ಎಸ್‌ಪಿ ಕಾರ್ತೀಕ್‌ರೆಡ್ಡಿ, ಎಎಸ್‌ಪಿ ಜಾಹ್ನವಿ, ಡಿವೈಎಸ್‌ಪಿ ಚೌಡಪ್ಪ, ವೃತ್ತ ನೀರಿಕ್ಷಕ ನಾಗರಾಜ್, ಎಸ್‌ಐ ಆಂಜಿನಪ್ಪ ಪಿಡಿಒ ದೀಪಾ ಹಾಜರಿದ್ದರು.