ಜಿಲ್ಲೆ

ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ, ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ಸೂಚನೆ

Kolar

ಕೋಲಾರ: ಕೋವಿಡ್-19 ನ ತುರ್ತು ಪರಿಸ್ಥಿತಿಯಲ್ಲಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಅವಧಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ದಾನಿಗಳು ನಿರಾಶ್ರೀತರಿಗೆ ವಿತರಿಸುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಪಲ್ಲವಿ ಹೊನ್ನಾಪುರ ತಿಳಿಸಿದರು.

ಜಿಲ್ಲಾ ವಾರ್ತಾ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಕರೊನಾ ಸೈನಿಕರಿಗೆ ಶನಿವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೇಯಿಸಿದ ಆಹಾರವನ್ನು ನಿರಾಶ್ರೀತರಿಗೆ ವಿತರಿಸುವ ಮುನ್ನಾ ಆಹಾರ ಇಲಾಖೆ ಅಥವಾ ಕಾರ್ಮಿಕ ಇಲಾಖೆ ಅಥವಾ ಅಧಿಕೃತ ಅಧಿಕಾರಿಗಳಿಂದ ಗುಣಮಟ್ಟ ಪರಿಶೀಲಿಸಿ ವಿತರಿಸಬೇಕು. ನಿರಾಶ್ರೀತರನ್ನು ಹೊರತು ಪಡಿಸಿ ಬಡವರಿಗೆ ಆಹಾರವನ್ನು ವಿತರಿಸುವಾಗ ಆಹಾರ ಸಾಮಗ್ರಿಗಳನ್ನು ಮಾತ್ರ ವಿತರಿಸುವ ಕ್ರಮ ವಹಿಸಬೇಕೆಂದರು.

ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕರೊನಾ ಪ್ರಕರಣ ಕಂಡು ಬಂದಿಲ್ಲ. ಈ ಸ್ಥಿತಿಯನ್ನು ಇದೇ ರೀತಿ ಕಾಯ್ದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಕರೊನಾ ಸೈನಿಕರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಜನರಲ್ಲಿ ಸೋಂಕು ತಡೆಯಲು ಅನುಸರಿಸೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕರು ಹೊರಗಿನಿಂದ ಮನೆ ಪ್ರವೇಶಿಸುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ ಸ್ಯಾನಿಟೈಸರ್ ಬಳಸಿ ಕೈಗಳನ್ನು ಶುಚಿಗೊಳಿಸಿಕೊಳ್ಳಬೇಕು. ಗೃಹಬಂಧನದಲ್ಲಿರುವವರು ಸಾರ್ವಜನಿಕವಾಗಿ ಹೊರಗೆ ಓಡಾಡುವುದು ಕಂಡುಬಂದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯ ಕಾರ್ಯನಿರ್ವಹಿಸುತ್ತಿರುವ ಕರೊನಾ ಸೈನಿಕರಿಗೆ ಕಿಟ್ ಬ್ಯಾಗ್, ಸ್ಯಾನಿಟೈಸರ್, ಮಾಸ್ಕ್ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಜಾಕೆಟ್‌ಗಳನ್ನು ವಿತರಿಸಿ ಕ್ಷೇತ್ರ ಕಾರ್ಯಕ್ಕೆ ತೆರಳುವಾಗ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು ಹಾಗೂ ಇತರ ವಸ್ತುಗಳನ್ನು ಮುಟ್ಟಿದ ನಂತರ ಸ್ಯಾನಿಟೈಸರ್ ಬಳಸಿ ಎಂದು ಸಲಹೆ ನೀಡಿದರು.

ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ನಿರ್ದೇಶಕ ಎಸ್.ನಾಗಶೇಖರ್, ಸಹಾಯಕ ವಾರ್ತಾಧಿಕಾರಿ ಕೆ.ಎನ್.ರಮೇಶ್, ತಾಲೂಕು ಸಂಯೋಜಕ ಕೆ.ಆರ್.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.