ಜಿಲ್ಲೆ

ಬೆಂಗಳೂರು ಕರಗಕ್ಕೂ ಕೊರೊನಾ ಕರಿನೆರಳು?

kumarvrl

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಪಾರಂಪರಿಕ ಧಾರ್ವಿುಕ ಆಚರಣೆ ‘ಬೆಂಗಳೂರು ಕರಗ’ಕ್ಕೂ ಆತಂಕ ಎದುರಾಗಿದೆ. ಉತ್ಸವ ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಮುಜರಾಯಿ ಇಲಾಖೆ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಪ್ರತಿ ವರ್ಷದಂತೆ ಚೈತ್ರ ಮಾಸದ ಸಪ್ತಮಿಯಂದು (ಮಾ.31)ಕರಗ ಉತ್ಸವ ಆರಂಭವಾಗಿ ಚೈತ್ರ ಪೌರ್ಣಿಮೆಯಂದು (ಏ. 8) ಕರಗಶಕ್ತೊ್ಯೕತ್ಸವ ನಡೆಯಬೇಕಿದೆ. ಈ ಬಾರಿ ಉತ್ಸವ ನಡೆಸಿಕೊಡಲು ಧರ್ಮರಾಯಸ್ವಾಮಿ ದೇವಾಲಯದ ಅರ್ಚಕ ಜ್ಞಾನೇಂದ್ರ ಈಗಾಗಲೇ ಕರಗ ಅಭ್ಯಾಸ ಸೇರಿ ಅಗತ್ಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಬೆಂಗಳೂರಿನಲ್ಲೂ ಕರೊನಾ ಸೋಂಕು ದೃಢಪಟ್ಟಿರುವುದು ದೇವಾಲಯದ ಆಡಳಿತ ಮಂಡಳಿ, ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಅಧಿಕಾರಿಗಳ ಸಭೆ: ಭಾವೈಕ್ಯತೆ ಬೆಸೆಯುವ ಕರಗ ಉತ್ಸವದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಇದಕ್ಕಾಗಿ ಬೆಂಗಳೂರು ಸೇರಿ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯು ಉತ್ಸವ ಯಾವ ರೀತಿ ನಡೆಸಬೇಕು ಎಂಬುದನ್ನು ನಿರ್ಧರಿಸಲು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಆರೋಗ್ಯ ಇಲಾಖೆ, ಬಿಬಿಎಂಪಿ, ಪೊಲೀಸ್ ಇಲಾಖೆ, ಮುಜರಾಯಿ ಇಲಾಖೆ ಅಧಿಕಾರಿಗಳು, ದೇವಾಲಯದ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ಜಲಧಿ ರಂಗಣ್ಣ ತಿಳಿಸಿದ್ದಾರೆ.

ಊರ ಹಬ್ಬಗಳಿಗೂ ಕಡಿವಾಣ ಸಾಧ್ಯತೆ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಸಾಲು ಸಾಲಾಗಿ ಊರ ಹಬ್ಬಗಳು ಸಮೀಪಿಸುತ್ತಿವೆ. ಮೆರವಣಿಗೆ, ಉತ್ಸವದ ಹೆಸರಿನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುತ್ತಾರೆ. ಹೀಗಾಗಿ ಊರ ಹಬ್ಬಗಳ ಆಚರಣೆಗೂ ಕಡಿವಾಣ ಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ರಾಮನವಮಿಗೂ ಅಡ್ಡಿ: ಕರಗಕ್ಕೂ ಮುನ್ನ ಶ್ರೀ ರಾಮನವಮಿ ಹಬ್ಬ (ಏ. 2) ಬರಲಿದ್ದು, ರಾಮನ ಉತ್ಸವವನ್ನು ಅದ್ದೂರಿ ಯಿಂದ ಆಚರಿಸಲಾಗುತ್ತದೆ. ಎಲ್ಲಡೆ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಕಾರ್ಯ ನಡೆಯುತ್ತದೆ. ಕರೊನಾ ಜತೆಗೆ ನಗರದಲ್ಲಿ ಕರುಳುಬೇನೆ, ಕಾಲರಾ, ಎಚ್1ಎನ್1 ಸೇರಿ ಸಾಲುಸಾಲು ರೋಗಗಳು ಉಲ್ಬಣಿಸುತ್ತಿರುವುದರಿಂದ ಸಾರ್ವಜನಿಕವಾಗಿ ರಾಮನವಮಿಯಲ್ಲಿ ಪಾನಕ-ಮಜ್ಜಿಗೆ ವಿತರಣೆಗೆ ಅವಕಾಶ ನೀಡದಿರಲು ಇಲಾಖೆ ಚಿಂತನೆ ನಡೆಸಿದೆ.