ಸಿಂಧನೂರು: ಎರಡು ತಿಂಗಳ ಹಿಂದೆಯೇ ರೈತರು ಜೋಳ ಮಾರಾಟಕ್ಕೆ ನೋಂದಣಿ ಮಾಡಿದ್ದರೂ ಜೋಳ ಖರೀದಿ ಕೇಂದ್ರ ತೆರೆಯದಿರುವುದು ಸಮಸ್ಯೆಯಾಗಿದ್ದು, ಸರ್ಕಾರ ಕೂಡಲೇ ಆರಂಭಿಸಬೇಕೆಂದು ರೈತ ಸಂಘ-ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ರೈತರು ಜೋಳ ಬೆಳೆದಿದ್ದಾರೆ. ಸರ್ಕಾರ ಶೀಘ್ರ ಜೋಳ ಖರೀದಿಸಬೇಕು. ಅಲ್ಲದೆ ಕೆಲ ವ್ಯಾಪಾರಿಗಳು ಜೋಳ ಬೆಳೆಯದೆ ಇದ್ದರೂ ಅಕ್ರಮವಾಗಿ ಬೆಳೆ ಬದಲಾವಣೆ ಮಾಡಿ, ಖರೀದಿ ಕೇಂದ್ರಕ್ಕೆ ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಇಂತಹ ಅಕ್ರಮದಲ್ಲಿ ಭಾಗಿಯಾದ ಗ್ರಾಮ ಆಡಳಿತ ಅಧಿಕಾರಿಗಳು, ಪಿಆರ್‌ಒಗಳ ವಿರುದ್ದ ಕ್ರಮಕೈಗೊಳ್ಳಬೇಕು. ಕಳೆದ ಬಾರಿ ಮಳೆಯಿಂದಾಗಿ ನಷ್ಟಕ್ಕೀಡಾದ ಭತ್ತದ ಬೆಳೆಗೆ ಇದುವರೆಗೆ ಪರಿಹಾರ ಬಂದಿಲ್ಲ.
ಜಾಲಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ನಷ್ಟವಾಗದೆ ಇರುವ ರೈತರಿಗೆ ಪರಿಹಾರ ಬಂದಿದ್ದು, ಬೆಳೆ ನಷ್ಟ ಹೊಂದಿದ್ದವರಿಗೆ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು. ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಮುಖಂಡರಾದ ಅಣ್ಣಪ್ಪ ಜಾಲಿಹಾಳ, ವೀರೇಶ ಜಾಲಿಹಾಳ, ಯೂಸೂಫ್‌ಸಾಬ್ ಕುನ್ನಟಗಿ ಇದ್ದರು.