ಹನೂರು: ತಾಲೂಕಿನ ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಪಾಳ್ಯ ಗ್ರಾಮದ ಜಮೀನೊಂದಕ್ಕೆ ಗುರುವಾರ ರಾತ್ರಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಮುಸುಕಿನ ಜೋಳದ ಫಸಲನ್ನು ನಾಶಪಡಿಸಿವೆ.
ಗ್ರಾಮದ ಪ್ರೇಮಾ ಎಂಬುವರ ಜಮೀನಿಗೆ ರಾತ್ರಿ 6 ಕಾಡಾನೆಗಳು ಲಗ್ಗೆ ಇಟ್ಟು ಒಂದು ಎಕರೆಯಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಫಸಲನ್ನು ತುಳಿದು ಹಾಗೂ ತಿಂದು ನಾಶಪಡಿಸಿದೆ. ಕಟಾವಿಗೆ ಬಂದಿದ್ದ ಮುಸುಕಿನ ಜೋಳ ನಷ್ಟವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಹಾರ ಒದಗಿಸಿಕೊಡಬೇಕೆಂದು ಪ್ರೇಮಾ ಒತ್ತಾಯಿಸಿದ್ದಾರೆ.