ಜಿಲ್ಲೆ

ಕೊಡಗಿನಲ್ಲಿ ಕಡಿಮೆಯಾದ ಏಲಕ್ಕಿ ಘಮಲು

ಸುನಿಲ್ ಪೊನ್ನೇಟಿ

ಮಡಿಕೇರಿ:

ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಿಸಿಕೊಳ್ಳುವ ಏಲಕ್ಕಿಯ ಘಮಲು ಸುಮಾರು ಎರಡೂವರೆ ದಶಕಗಳ ಹಿಂದಿನ ತನಕವೂ ಕೊಡಗಿನಲ್ಲಿ ಜೋರಾಗಿತ್ತು. ಆದರೆ ಕಟ್ಟೆರೋಗ, ಕೊಳೆ ರೋಗದ ಹಾವಳಿಯಿಂದ ದೊಡ್ಡ ಪ್ರಮಾಣದಲ್ಲಿ ಗಿಡಗಳು ನಾಶವಾಗಿದ್ದರೆ, ನಿರ್ವಹಣಾ ವೆಚ್ಚ, ಬೆಲೆಯ ಅನಿಶ್ಚಿತತೆಯ ಕಾರಣಕ್ಕೆ ಹೆಚ್ಚಿನ ಏಲಕ್ಕಿ ಬೆಳೆಗಾರರು ತಮ್ಮ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಏಲಕ್ಕಿ ಪ್ರಮಾಣದಲ್ಲಿ ಕರ್ನಾಟಕದ ಪಾಲು ಶೇ.23. ಇದರಲ್ಲಿ ಕೊಡಗಿನ ಕೊಡುಗೆ ಶೇ.40. ಕೊಡಗಿನಲ್ಲಿ ಒಂದು ಅಂದಾಜಿನ ಪ್ರಕಾರ ಪ್ರಸ್ತುತ 11,680 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದೆ. ಸರಾಸರಿ ಬೆಳೆಗಾರರ ಸಂಖ್ಯೆ ತೀರಾ ಇಳಿಮುಖವಾಗಿದ್ದು 750ರ ಆಸುಪಾಸಿನಲ್ಲಿದೆ. ವಾರ್ಷಿಕ ಸರಾಸರಿ 150ರಿಂದ 250 ಇಂಚು ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿ ಹೆಚ್ಚಾಗಿ ಬೆಳೆಯಲಾಗುತ್ತಿದೆ.

ಜಿಲ್ಲೆಯಲ್ಲಿ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ಬೆಟ್ಟ ತಪ್ಪಲಿನ ಪ್ರದೇಶ, ಮಡಿಕೇರಿ ತಾಲೂಕಿನ ಭಾಗಮಂಡಲ, ಕಕ್ಕಬ್ಬೆ, ವಿರಾಜಪೇಟೆ ತಾಲ್ಲೂಕಿನ ಬಿರುನಾಣಿ, ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಏಲಕ್ಕಿ ಪ್ರಧಾನ ಕÊಷಿಯಾಗಿದ್ದ ಕಾಲವೊಂದು ಇತ್ತು. ಎರಡೂವರೆ ದಶಕಗಳ ಹಿಂದೆ ಏಲಕ್ಕಿ ಕಣಜವೆಂದು ಕರೆಸಿಕೊಳ್ಳುತ್ತಿದ್ದ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಕುಮಾರಳ್ಳಿ, ನಾಡ್ನಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಬೀದಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಮುಕ್ಕೋಡ್ಲು, ಕುಮಾರಳ್ಳಿ, ಮಾಲ್‌ಮಾನೆ, ಕೂತಿ, ತೋಳೂರುಶೆಟ್ಟಳ್ಳಿ, ಬಿಳಿಗೇರಿ, ತಾಕೇರಿ, ಕಿರಗಂದೂರು, ತಲ್ತಾರೆ ಶೆಟ್ಟಳ್ಳಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಈಗ ಏಲಕ್ಕಿ ಅಪರೂಪದ ಬೆಳೆ ಎನ್ನುವಂತಾಗಿಬಿಟ್ಟಿದೆ.

ಮಳೆಯ ಕಣ್ಣಾಮುಚ್ಚಾಲೆ ಏಲಕ್ಕಿ ಕÊಷಿ ಮೇಲೆ ದೊಡ್ಡ ಮಟ್ಟದಲ್ಲಿ ದುಷ್ಪರಿಣಾಮ ಬೀರಿದೆ. ಏಲಕ್ಕಿಗಿಂತ ಕಾಫಿ ಬೆಳೆಯುವುದು ಸುಲಭ ಎಂದು ಬೆಳೆಗಾರರು ಭಾವಿಸಿರುವುದರಿಂದಲೂ ಏಲಕ್ಕಿ ಕಡೆ ಆಸಕ್ತಿ ಕಡಿಮೆ ಆಗಿದೆ. ಕಾಫಿ ಮತ್ತು ಕರಿಮೆಣಸಿಗೆ ಹೋಲಿಸಿದರೆ ಏಲಕ್ಕಿ ಹೆಚ್ಚು ಕಾರ್ಮಿಕರನ್ನು ಬಯಸುವ ಕೃಷಿಯಾಗಿದ್ದು ಈಗ ಕಾರ್ಮಿಕರ ಕೊರತೆ ಇರುವುದರಿಂದಲೂ ಏಲಕ್ಕಿ ಬೆಳೆಗಾರರು ಈ ಬೆಳೆಯತ್ತ ಮನಸ್ಸು ಮಾಡುತ್ತಿಲ್ಲ. ಬೆಲೆಯ ಏರಿಳಿತವೂ ಏಲಕ್ಕಿ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಲೌಡ್ ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ನೂರಾರು ವರ್ಷಗಳಿಂದ ಏಲಕ್ಕಿ ಬೆಳೆಯುತ್ತಿದ್ದಾರೆ. ರೋಗ ಬಾಧೆ ಯಿಂದ ಇವತ್ತಿಗೂ ನಷ್ಟವಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಸರ್ಕಾರ ಎಕರೆಗೆ 50 ಸಾವಿರ ರೂ. ಸಹಾಯಧನ ಕೊಟ್ಟು ಪುನಶ್ಚೇತನಕ್ಕೆ ಮುಂದಾಗಬೇಕು.

ಕೆ.ಎಚ್. ಅರ್ಪಿತಾ, ಗೃಹಿಣಿ, ಕುಮಾರಳ್ಳಿ ಗ್ರಾಮ

ಏಲಕ್ಕಿ ಪುನಶ್ಚೇತನಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಹತ್ತು ವರ್ಷಗಳ ಕಾಲ ಯೋಜನೆ ಚಾಲ್ತಿಯಲ್ಲಿರಬೇಕು. ಸರ್ಕಾರದ ಸೌಲಭ್ಯ ಕೊರತೆಯಿಂದ ಕೊಡಗಿನ ಕಿತ್ತಳೆ ಸರ್ವ ನಾಶ ಆಯಿತು. ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಕೊಡಗಿನಲ್ಲಿ ಏಲಕ್ಕಿ, ಭತ್ತವನ್ನು ಹುಡುಕಬೇಕು. ಸರ್ಕಾರ ರೈತರಿಗಾಗಿ ಕೆಲ ಯೋಜನೆಗಳನ್ನು ಮಾಡಿದೆ ನಿಜ. ಆದರೆ ರೈತರಿಗೆ ತಲುಪುವುದು ಮಾತ್ರ ಅಷ್ಟಕಷ್ಟೇ...

ಎ. ಆರ್. ಕುಶಾಲಪ್ಪ, ರೈತ ಮುಖಂಡ, ಯಡೂರು ಗ್ರಾಮ

ಏಲಕ್ಕಿ ತಂಪನ್ನು ಬಯಸುವ ಬೆಳೆ. ಇತ್ತೀಚೆಗಿನ ವರ್ಷಗಳಲ್ಲಿ ಕೊಡಗಿನಲ್ಲಿ ಸ್ಥಿರ ಹವಾಮಾನ ಇಲ್ಲದಂತಾಗಿದೆ. ಇದರಿಂದ ಏಲಕ್ಕೆ ಬೆಳೆಯಲ್ಲಿ ಏರುಪೇರು ಆಗುತ್ತಿದೆ. ಕೆಲವು ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿದ್ದರು ಕೂಡ ಅದು ಎಲ್ಲ ರೈತರಿಗೂ ಒದಗುತ್ತಿಲ್ಲ. ಪ್ರಸ್ತುತ ಹವಾಮಾನಕ್ಕೆ ತಕ್ಕುದಾದ ತಳಿಗಳನ್ನು ಅಭಿವೃದ್ಧಿಪಡಿಸಿದರೆ ಮತ್ತೆ ಕೊಡಗಿನಲ್ಲಿ ಏಲಕ್ಕಿ ಕಂಪನ್ನು ಕಾಣಬಹುದು.

ಆರ್. ಸುಭೀಶ್, ಸಾಮಾಜಿಕ ಕಾರ್ಯಕರ್ತ, ಗೋಣಿಕೊಪ್ಪಲು

ಕೊಡಗು ಎಂದರೆ ಕಾಫಿ, ಕಿತ್ತಳೆ, ಏಲಕ್ಕಿಯ ತವರೂರು ಆಗಿತ್ತು. ಆದರೆ ಇತ್ತೀಚಿಗೆ ಅನೇಕ ಬೆಳೆಗಳು ನಶಿಸಿ ಹೋಗುತ್ತಿದೆ. ಅದರಲ್ಲಿ ಏಲಕ್ಕಿ ಬೆಳೆಯೂ ಒಂದು. ವಾತಾವರಣದ ಏರಿಳಿತದಿಂದ ನಿರೀಕ್ಷಿಸಿದ ಆದಾಯ ಬರುತ್ತಿರಲಿಲ್ಲ. ಆದರಿಂದ ಅನೇಕರು ತಮ್ಮ ಹೊಲ ಗದ್ದೆಗಳನ್ನು ಬೇರೆ ಬೆಳೆ ಬೆಳೆಯಲು ಬದಲಾವಣೆ ಮಾಡಿಕೊಂಡರು. ಸಂಬAಧ ಪಟ್ಟ ಸಾಂಬಾರ ಮಂಡಳಿ ಸೇರಿದಂತೆ ಕಾಳಜಿ ಇರುವ ಎಲ್ಲರೂ ಕೊಡಗಿನಲ್ಲಿ ಏಲಕ್ಕಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ.

ರವಿಕುಮಾರ್, ಅಧ್ಯಕ್ಷ, ಸರ್ಕಾರಿ ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ, ನೆರುಗಳಲೆ

ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಫಿ ಮತ್ತು ಕರಿಮೆಣಸಿನಂತಹ ವಾಣಿಜ್ಯ ಬೆಳೆಗಳ ಮೇಲೆ ಬೆಳೆಗಾರರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ಏಲಕ್ಕಿ ಬೆಳೆಯುವವರ ಪ್ರಮಾಣ ಕಡಿಮೆಯಾಗುತ್ತಿದೆ. ಏಲಕ್ಕಿ ಬೆಳೆಗೆ ತಂಪಾದ ವಾತಾವರಣ ಬೇಕಿದ್ದು ಕಾಫಿ ಬೆಳೆಗೆ ಬಿಸಿಲಿನ ಪ್ರಮಾಣ ಸ್ವಲ್ಪ ಹೆಚ್ಚು ಬೇಕಾಗುತ್ತದೆ. ಆದ್ದರಿಂದ ಕಾಫಿ ತೋಟಗಳಲ್ಲಿ ಏಲಕ್ಕಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಕೆಲವರು ಬೆಳೆಯುತ್ತಿದ್ದರೂ ಅದರ ಪ್ರಮಾಣ ತೀವ್ರ ಕಡಿಮೆಯಾಗುತ್ತಿದೆ .

ಐ.ಸಿ. ಮಾಚಯ್ಯ, ದೇವಣಗೇರಿ, ವಿರಾಜಪೇಟೆ.

ಸಾಂಬಾರ ಪದಾರ್ಥದಲ್ಲಿ ಹೆಚ್ಚು ಹೆಗ್ಗಳಿಕೆಯನ್ನು ಹೊಂದಿರುವ ಏಲಕ್ಕಿ ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಮರೆಯಾಗಲು ಮುಖ್ಯ ಕಾರಣವೆಂದರೆ ವಾತಾವರಣದಲಾಗುತ್ತಿರುವ ಬದಲಾವಣೆ. ಇವರೊಂದಿಗೆ ವಿವಿಧ ರೋಗ ಬಾಧೆಗಳಿಂದಾಗಿ ಏಲಕ್ಕಿ ಬೆಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಅದರೊಂದಿಗೆ ಏಲಕ್ಕಿಯ ಕುರಿತು ಬೆಳೆಗಾರರು ಹೆಚ್ಚು ಆಸಕ್ತಿ ವಹಿಸಿದ ಕಾರಣ ಏಲಕ್ಕಿ ಬೆಳೆ ಗಣನೀಯವಾಗಿ ಇಳಿಕೆಯಾಗಿದೆ.

ಎನ್.ಡಿ. ಗೌರಮ್ಮ, ಬೇಟೋಳಿ ಗ್ರಾಮ, ವಿರಾಜಪೇಟೆ

ಕೊಡಗಿನಲ್ಲಿ ಏಲಕ್ಕಿ ಕೃಷಿ ಅವನತಿಯತ್ತ ಸಾಗಲು ಏಲಕ್ಕಿ ಬೆಳೆಗೆ ಸಕಾರಾತ್ಮಕ ವಾತಾವರಣ ಇಲ್ಲದಿರುವುದು ಮೂಲ ಕಾರಣವಾದರೆ ಇತ್ತೀಚೆಗೆ ಉತ್ತಮ ಬೆಲೆ ಇರುವಾಗ ಏಲಕ್ಕಿ ಬೆಳೆಗೆ ಮಾರಣಾಂತಿಕ ರೋಗ ಬಂದಿರುವುದು ಇನ್ನೊಂದು ಕಾರಣ. ರೋಗ ಹತೋಟಿಗೆ ಯಾವುದೇ ಔಷಧಿಗಳು ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ತೋಟಗಳಲ್ಲಿ ಇತರ ಬೆಳೆಗಳೊಂದಿಗೆ ಏಲಕ್ಕಿ ಬೆಳೆಗೂ ಮಂಗಗಳ ಉಪಟಳ ಅಧಿಕವಾಗಿದೆ. ಇದರಿಂದ ಕೃಷಿಕರು ಏಲಕ್ಕಿ ಬೆಳೆಯುವಲ್ಲಿ ಸೋತಿದ್ದಾರೆ.

ಕಡ್ಯದ ಸ್ಮಿತಾ ಜೀವನ್, ಅವಂದೂರು ಗ್ರಾಮ

ಕಟ್ಟೆರೋಗ, ಅರಣ್ಯನಾಶ ಮತ್ತಿತರ ಕಾರಣಗಳಿಂದ ಕೊಡಗಿನಲ್ಲಿ ಏಲಕ್ಕಿಯ ಘಮ ಘಮ ಕಡಿಮೆ ಆಗಿದೆ. ನಮ್ಮ ಸಂಘದ ಮೂಲಕ ವರ್ಷಕ್ಕೆ ಮೂರೂವರೆ ಲಕ್ಷ ಕೆಜಿ ಏಲಕ್ಕಿ ಮಾರಾಟವಾದ ದಿನಗಳು ಹಿಂದೆ ಇದ್ದವು. ಕಳೆದ 30-35 ವರ್ಷಗಳ ಹಿಂದೆ ನಿಂತು ಹೋಗಿದ್ದ ಏಲಕ್ಕಿ ಖರೀದಿ ಈಗ ಆರಂಭಿಸಲಾಗಿದ್ದು, ಕೊಡಗಿನ ಏಲಕ್ಕಿ ಬೆಳೆಗಾರರಿಗೆ ಉತ್ತಮ ದರ ಕೊಡಲಾಗುತ್ತಿದೆ. ಏಲಕ್ಕಿ ಬೆಳೆಗಾರರಿಗೆ ಸರ್ಕಾರದ ಸಹಾಯ ಇಲ್ಲಿದಿರುವುದು ವಿಷಾಧನೀಯ. ಬೆಳೆಗಾರರ ಹಿತ ದೃಷ್ಟಿ ಗಮನದಲ್ಲಿ ಇಟ್ಟುಕೊಂಡು 1.5 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟು ಶಾಸಕ ಡಾ. ಮಂತರ್ ಗೌಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸೂದನ ಎಸ್. ಈರಪ್ಪ, ಅಧ್ಯಕ್ಷ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ

ಏಲಕ್ಕಿಗಿಂತ ಕಾಫಿ ಬೆಳೆಯುವುದು ಸುಲಭ ಎನ್ನುವ ಕಾರಣಕ್ಕೆ ಬಹುತೇಕ ಬೆಳೆಗಾರರು ಕಾಫಿ ಬೆಳೆಯಲು ಶುರು ಮಾಡಿದರು. ಕಾಫಿ ಮತ್ತು ಕರಿಮೆಣಸಿಗೆ ಹೋಲಿಸಿದರೆ ಏಲಕ್ಕಿ ಹೆಚ್ಚು ಕಾರ್ಮಿಕರನ್ನು ಬಯಸುವ ಕೃಷಿ. ಆದರೆ ಈಗ ಬೇಡಿಕೆಯಷ್ಟು ಕಾರ್ಮಿಕರು ಸಿಗುತ್ತಿಲ್ಲ. ಇದು ಕೂಡ ಏಲಕ್ಕಿ ಬೆಳೆಗಾರರು ವಿಮುಖರಾಗಲು ಮತ್ತೊಂದು ಕಾರಣ. ಬೆಲೆಯ ಏರಿಳಿತವೂ ಏಲಕ್ಕಿ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಇವೆಲ್ಲಾ ಸವಾಲುಗಳ ಮಧ್ಯೆಯೂ ಕೆಲವು ಬೆಳೆಗಾರರು ಏಲಕ್ಕಿ ಬೆಳೆಯುವಲ್ಲಿ ಯಶಸ್ವಿಯಾದ ಉದಾಹರಣೆಗಳೂ ಕೊಡಗಿನಲ್ಲಿ ಇದೆ.

ಡಾ. ಎಸ್.ಜೆ. ಅಂಕೇಗೌಡ, ಮುಖ್ಯಸ್ಥರು, ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ