ಚಿಕ್ಕಮಗಳೂರು: ಇನ್ನೆರಡು ಮೂರು ದಿನಗಳಲ್ಲಿ ಎಎಸ್‍ಐ ಆಗಿ ಬಡ್ತಿ ಪಡೆಯಲಿದ್ದ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ಮರಳುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಖರಾಯಪಟ್ಟಣ ಠಾಣೆಯ ಕಾನ್‍ಸ್ಟೇಬಲ್ ಟಿ.ಎಸ್.ಸಿದ್ದರಾಮಪ್ಪ (50) ಎಂಬುವವರೇ ಮೃತಪಟ್ಟವರು. ರಾತ್ರಿ ತಮ್ಮ ಬೈಕ್‍ನಲ್ಲಿ ನಗರ ಹೊರವಲಯದ ಕಲ್ದೊಡ್ಡಿಯಲ್ಲಿರುವ ಮನೆಗೆ ಮರಳುತ್ತಿದ್ದರು. ಹಿರೇಗೌಜ ಸಮೀಪದ ತಿರುವು ಬಳಿ ನಗರದಿಂದ ಸಖರಾಯಪಟ್ಟಣ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾದರು.
ಕಮರಿದ ಬಡ್ತಿ ಕನಸು
ಮೂಲತಃ ಅಜ್ಜಂಪುರ ತಾಲೂಕು ತಮ್ಮಟದ ಹಳ್ಳಿಯವರಾದ ಸಿದ್ದರಾಮಪ್ಪ ಇನ್ನು ಎರಡು ಅಥವಾ ಮೂರು ದಿನಗಳಲ್ಲಿ ಎಎಸ್‍ಐ ಆಗಿ ಬಡ್ತಿ ಹೊಂದಲಿದ್ದರು. ಬಡ್ತಿ ಪಟ್ಟಿಯಲ್ಲಿ ಇವರ ಹೆಸರು ಮೊದಲಿತ್ತು. ಡಿ.5ರ ಬಳಿಕ ನಿಯೋಜಿತ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಹೀಗಾಗಿ ಸಮವಸ್ತ್ರವನ್ನು ಸಹ ಸಿದ್ಧಪಡಿಸಿ ಕಳೆದ ಎರಡು ದಿನಗಳ ಹಿಂದೆ ಫೋಟೋ ತೆಗೆಸಿಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿ ಅವರ ಕನಸು ಕಮರಿಹೋಯಿತು.
ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಪುತ್ರಿ ಫಿಸಿಯೋಥೆರಪಿ ಕೋರ್ಸ್ ಮಾಡುತ್ತಿದ್ದರೆ, ಪುತ್ರ ಪಿಯುಸಿ ವಿದ್ಯಾರ್ಥಿ. ಗುರುವಾರ ರಾಮನಹಳ್ಳಿಯ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.