ಮಡಿಕೇರಿ:
ರಾಜ್ಯ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಅನುಮೋದನೆ ನೀಡಿರುವುದರಿಂದ ಪ್ರವಾಸಿ ಜಿಲ್ಲೆ ಕೊಡಗಿನಲ್ಲಿ ಮತ್ತಷ್ಟು ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಮೂಡಿಸಿದೆ. ಪ್ರಮುಖವಾಗಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಆದ್ಯತೆ ಕೊಟ್ಟಿರುವುದು ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಅನಿವಾರ್ಯತೆ ಸೃಷ್ಟಿಸಿದೆ. ವೈನ್ ಮತ್ತು ಕಾಫಿ ಪ್ರವಾಸೋದ್ಯಮ್ಯಕ್ಕೆ ಒತ್ತು ಕೊಟ್ಟಿರುವುದು ಕೂಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
2 ವಾರಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ಕ್ಕೆ ಅನುಮೊದನೆ ನೀಡಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರಕ್ಕೆ 1,500 ಕೋಟಿ ರೂ. ಹೂಡಿಕೆ ಸೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಮೂಲಕ ನೇರವಾಗಿ 47 ಸಾವಿರ ಮತ್ತು ಪರೋಕ್ಷವಾಗಿ 1 ಲಕ್ಷ ಉದ್ಯೋಗ ಸೃಷ್ಟಿಯ ಸಾಧ್ಯತೆ ಮೇಲೂ ಗಮನ ಕೇಂದ್ರೀಕರಿಸಲಾಗಿದೆ. ವರ್ಷಕ್ಕೆ 20 ಲಕ್ಷ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಈಗಿರುವ 23 ಕೋಟಿಗೆ ಬದಲಾಗಿದೆ ಸುಮಾರು 48 ಕೋಟಿಯಷ್ಟು ದೇಶೀಯ ಪ್ರವಾಸಿಗರನ್ನು ಕರ್ನಾಟಕಕ್ಕೆ ಸೆಳೆಯುವುದಕ್ಕೆ ಸಂಬAಧಿಸಿದAತೆ ಆಕರ್ಷಣೆಗಳನ್ನು ರೂಪಿಸಲು ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಒತ್ತು ಕೊಡಲಾಗಿದೆ. ಈ ಮೂಲಕ ಸ್ವದೇಶಿ ಪ್ರವಾಸಿಗರ ಭೇಟಿಯಲ್ಲಿ ದೇಶದ ಮೊದಲ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಬೇಕು ಎನ್ನುವ ಉದ್ದೇಶ ಇಟ್ಟುಕೊಳ್ಳಲಾಗಿದೆ.
ಸಾಹಸ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ಕ್ಯಾರವಾನ್, ಕರಾವಳಿ, ಕಡಲತೀರ, ಪಾಕಪದ್ಧತಿ, ಸಾಂಸ್ಕೃತಿಕ, ಸಾಂಪ್ರದಾಯಿಕ, ಪರಿಸರ, ಶಿಕ್ಷಣ, ಚಲನಚಿತ್ರ, ಗಾಲ್ಫ್, ಕ್ರೀಡೆ, ಬುಡಕಟ್ಟು, ಮದುವೆಯ ತಾಣಗಳ ಅಭಿವೃದ್ಧಿ, ಆರೋಗ್ಯ ವಿಚಾರಗಳಿಗೆ ಉತ್ತೇಜನ ಸೇರಿದಂತೆ ಹೊಸ ಪ್ರವಾಸೋದ್ಯಮ ನೀತಿಯಲ್ಲಿ 24 ಪ್ರವಾಸೋದ್ಯಮ ಪರಿಕಲ್ಪನೆಗಳನ್ನು ರೂಪಿಸಿ ಪ್ರೋತ್ಸಾಹ ನೀಡಲು ಚಿಂತಿಸಲಾಗಿದೆ. ಈ ಪೈಕಿ ಸಾಹಸ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ಕ್ಯಾರವಾನ್, ಪಾಕಪದ್ಧತಿ, ಸಾಂಸ್ಕೃತಿಕ, ಸಾಂಪ್ರದಾಯಿಕ, ಪರಿಸರ, ಶಿಕ್ಷಣ, ಚಲನಚಿತ್ರ, ಗಾಲ್ಫ್, ಕ್ರೀಡೆ, ಬುಡಕಟ್ಟು, ಮದುವೆಯ ತಾಣಗಳ ಅಭಿವೃದ್ಧಿ ಸೇರಿದಂತೆ ಬಹುತೇಕ ಪರಿಕಲ್ಪನೆಗಳು ಕೊಡಗಿಗೆ ಪೂರಕವಾಗಿದೆ.
ಅಪಾರ್ಟ್ಮೆಂಟ್, ಹೋಟೆಲ್, ಸರ್ವೀಸ್ ಅಪಾರ್ಟ್ಮೆಂಟ್‌ಗಳು, ಅಕ್ವೇರಿಯಂ, ಬೀಚ್ ಶಾಕ್‌ಗಳು, ಅಮ್ಯೂಸ್‌ಮೆಂಟ್ ಪಾರ್ಕ್ ಸೇರಿದಂತೆ 46 ಯೋಜನೆಗಳನ್ನೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗುರುತಿಸಲಾಗಿದೆ. ಕರಾವಳಿ, ಬೀಚ್, ಹೊರತುಪಡಿಸಿ ಉಳಿದ ಯೋಜನೆಗಳಿಗೂ ಕೊಡಗಿನಲ್ಲಿ ಹೇರಳ ಅವಕಾಶಗಳಿವೆ. ಕರ್ನಾಟಕ ಪ್ರವಾಸೋದ್ಯಮದ ಹೊಸ ನೀತಿ ಪ್ರವಾಸೋದ್ಯಮ ಕ್ಷೇತ್ರವನ್ನು ಅತ್ಯಂತ ಆದ್ಯತೆಯ ಉತ್ಸಾಹದಾಯಕ ಮತ್ತು ಪುಷ್ಟಿಕರಿಸಿದ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಬಡ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗ ಹಾಗೂ ಗಣ್ಯ ವರ್ಗ ಸೇರಿದಂತೆ ಸಮಾಜದ ಎಲ್ಲಾ ಸ್ಥರಗಳ ಪ್ರವಾಸಿ ಅವಶ್ಯಕತೆಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಪ್ರವಾಸೋದ್ಯಮ ನೀತಿ ರಚಿಸಲಾಗಿದೆ ಎನ್ನುತ್ತಾರೆ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ, ಕೃಷಿ ಪ್ರವಾಸ, ಆರೋಗ್ಯ ಕ್ಷೇತ್ರದ ಹೊಸ ಅನುಭವಗಳ ಪ್ರವಾಸೋದ್ಯಮ, ಆಧ್ಯಾತ್ಮಿಕ, ತೀರ್ಥ ಯಾತ್ರೆ, ಪಾರಂಪರಿಕ ತಾಣಗಳ ಭೇಟಿ, ಅಧ್ಯಯನ ಪ್ರವಾಸ, ಸಾಹಸ ಪ್ರವಾಸೋದ್ಯಮದ ಜೊತೆಗೆ ವಿರಾಮ, ವಿನೋದ, ಜ್ಞಾನಾರ್ಜನೆ, ಮನಃಶಾಂತಿ, ವಿಶ್ರಾಂತಿ ಮುಂತಾದವುಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಹೊಸ ನೀತಿ ರೂಪಿಸಲಾಗಿದೆ.
ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಉತ್ತೇಜಿಸಲು ವಿವಿಧ ಇಲಾಖೆಗಳು, ಮಂಡಳಿಗಳ ಜತೆ ಸಹಯೋಗಕ್ಕೂ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಆದ್ಯತೆ ಕೊಡಲಾಗಿದೆ. ಕರ್ನಾಟಕ ವೈನ್ ಮಂಡಳಿ ಜತೆ ಸಹಯೋಗದೊಂದಿಗೆ ವೈನ್ ಪ್ರವಾಸೋದ್ಯಮ, ಭಾರತೀಯ ಕಾಫಿ ಮಂಡಳಿ ಸಹಯೋಗದಲ್ಲಿ ಕಾಫಿ ಪ್ರವಾಸೋದ್ಯಮ ಬೆಳೆಸಲು ಆದ್ಯತೆ ಕೊಡಲಾಗಿದೆ. ಕೊಡಗಿನ ಪಾಲಿಗೆ ಇದು ಹೆಚ್ಚು ಉಪಯುಕ್ತವಾಗಿದೆ. ಈಗಾಗಲೇ ಜಿಲ್ಲೆಯ ಹೋಮ್ ಮೇಡ್ ವೈನ್ ಪ್ರವಾಸಿಗರಲ್ಲಿ ಮನೆ ಮಾತಾಗಿದ್ದು, ವೈನ್ ಮಂಡಳಿ ಮೂಲಕ ಪ್ರೋತ್ಸಾಹ ದೊರೆತಲ್ಲಿ ಮಹಿಳೆಯರೇ ಹೆಚ್ಚಾಗಿ ತೊಡಗಿಸಿಕೊಂಡಿರುವ ಬೈನ್ ತಯಾರಿಕಾ ಉದ್ಯಮ ಇನ್ನೂ ಹೆಚ್ಚಿನ ಮಟ್ಟದಲ್ಲಿ ವ್ಯಾಪಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
ಕಾಫಿ ಪ್ರವಾಸೋದ್ಯಮವೂ ಕೊಡಗಿನಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಕಾಫಿ ತೋಟಗಳಲ್ಲಿ ನಡೆದಾಡುವುದು ಮತ್ತು ವಾಹನಗಳಲ್ಲಿ ಅಡ್ಡಾಡುವುದು ಪ್ರವಾಸಿಗರ ಮೆಚ್ಚಿನ ಚಟುವಟಿಕೆಗಳಲ್ಲಿ ಒಂದಾಗಿದೆ. ಕಾಫಿ ತೋಟದಿಂದ ಲೋಟದ ತನಕ ಹಲವು ಪ್ರಕ್ರಿಯೆಗಳಿದ್ದು ಇವುಗಳನ್ನು ಪರಿಣಾಮಕಾರಿಯಾಗಿ ಪ್ರವಾಸಿಗರಿಗೆ ತಲುಪಿಸುವ ಕೆಲಸ ಇನ್ನೂ ಆಗಿಲ್ಲ. ಈ ನಿಟ್ಟಿನಲ್ಲಿ ಕಾಫಿ ಪ್ರವಾಸೋದ್ಯಮ ಉತ್ತೇಜಿಸಲು ಭಾರತೀಯ ಕಾಫಿ ಮಂಡಳಿಯ ಸಹಯೋಗ ಪಡೆದುಕೊಳ್ಳಲು ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಚಿಂತನೆ ನಡೆದಿರುವುದು ಜಿಲ್ಲೆಯಲ್ಲಿ ಸಾಕಷ್ಟು ಅನುಕೂಲ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಪ್ರವಾಸೋದ್ಯಮದ ಪ್ರಚಾರಕ್ಕೂ ಹೊಸ ನೀತಿಯಲ್ಲಿ ಆದ್ಯತೆ ಕೊಡಲಾಗಿದೆ. 'ಉಲ್ಲಾಸ ಪ್ರವಾಸ'ೆ ಎನ್ನುವ ಪರಿಕಲ್ಪನೆಯಲ್ಲಿ ಕಿರು ಪ್ರವಾಸ ಮತ್ತು ವಾರಾಂತ್ಯದ ಪ್ರವಾಸ ಉತ್ತೇಜಿಸುವ ಅಭಿಯಾನಗಳನ್ನು ನಡೆಸುವ ಚಿಂತನೆಯೂ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಸೇರಿದೆ. ಇದು ಕೂಡ ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆ ಪೂರಕವಾಗಲಿದೆ. ಬೆಂಗಳೂರು-ಮೈಸೂರು ಅತ್ಯಾಧುನಿಕ ಹೆದ್ದಾರಿ ನಿರ್ಮಾಣವಾಗಿ ಈ ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿ ಇಳಿಕೆ ಆದ ನಂತರ ಕೊಡಗಿಗೆ ಏಕದಿನದ ಪ್ರವಾಸ ಬರುವವರ ಸಂಖ್ಯೆ ಹೆಚ್ಚಾಗಿದೆ. ಮೈಸೂರು-ಕುಶಾಲನಗರ ಚತುಷ್ಪತ ಹೆದ್ದಾರಿ ಕಾಮಗಾರಿ ಪೂರ್ಣವಾದರೆ ಈ ಸಂಖ್ಯೆ ದ್ವಿಗುಣವಾಗಲಿದೆ. ಹಾಗಾಗಿ 'ಉಲ್ಲಾಸ ಪ್ರವಾಸ'Éದ ಬಗ್ಗೆಯೂ ದೊಡ್ಡ ಮಟ್ಟದ ನಿರೀಕ್ಷೆಗಳಿವೆ.
ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಪ್ರಸ್ತಾಪ ಮಾಡಲಾಗಿದೆ. ರಾತ್ರಿ ಮಾರುಕಟ್ಟೆ, ಕಲಾ ಗ್ರಾಮಗಳ ನಿರ್ಮಾಣ, ಸ್ಮಾರಕಗಳಿಗೆ ದೀಪಾಲಂಕಾರ, ಧ್ವನಿ ಮತ್ತು ಬೆಳಕು ಕಾರ್ಯಕ್ರಮ, ಆಹಾರ ಜಾತ್ರೆ, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಬಗ್ಗೆ ಪ್ರವಾಸೋದ್ಯಮ ನೀತಿಯಲ್ಲಿ ಚಿಂತನೆ ನಡೆಸಲಾಗಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 30 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಪ್ರಸ್ತಾಪ ಇದ್ದು, ಕೊಡಗಿನ ಒಂದು ಪ್ರವಾಸಿತಾಣವೂ ಸ್ಥಾನ ಪಡೆದುಕೊಳ್ಳಲಿದೆ. 2029ರ ವೇಳೆ ರಾಜ್ಯದಲ್ಲಿ 50 ಸಾಹಸ ಪ್ರವಾಸೋದ್ಯಮ ಕೇಂದ್ರಗಳನ್ನು ರೂಪಿಸುವ ಗುರಿಯನ್ನೂ ಹೊಂದಲಾಗಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು, ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸಲು, ಉದ್ಯೋಗವನ್ನು ಸೃಷ್ಟಿಸಲು, ಕರ್ನಾಟಕದ ಜನರಿಗೆ ಸಾಮಾಜಿಕ-ಆರ್ಥಿಕ ಉನ್ನತಿಯನ್ನು ಸುಗಮಗೊಳಿಸಲು ಮತ್ತು ರಾಜ್ಯದ ಜಿ.ಎಸ್.ಡಿ.ಪಿ ಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆಯನ್ನು ಹೆಚ್ಚಿಸಲು ಮೂಲಭೂತ ಬಲವಾದ ಅಡಿಪಾಯವನ್ನು ಒದಗಿಸುತ್ತದೆ.
ಹೆಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವ
ಪ್ರವಾಸೋದ್ಯಮ ಅಭಿವೃದ್ಧಿಪಡಿಸುವಲ್ಲಿ ಈಗಿನ ಪ್ರವಾಸೋದ್ಯಮ ಸಚಿವರು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಈ ಸಂಬAಧ ಈಗಾಗಲೇ ಹಲವು ಬಾರಿ ಸಾಕಷ್ಟು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಪಷ್ಟ ಮಾರ್ಗಸೂಚಿ ಹಾಕಿ ಕೊಟ್ಟಂತೆ ಆಗಲಿದೆ. ಪ್ರವಾಸಿ ಜಿಲ್ಲೆ ಕೊಡಗಿಗೂ ಸಾಕಷ್ಟು ಅನುಕೂಲ ಆಗುವ ನಿರೀಕ್ಷೆ ಇದೆ.
ಬಿ.ಆರ್. ನಾಗೇಂದ್ರ ಪ್ರಸಾದ್, ಚೇಂಬರ್ ಆಫ್ ಕಾಮಸ್ ಅಧ್ಯಕ್ಷ, ಕೊಡಗು