ಅಂಕೋಲಾ: ಪಟ್ಟಣ ವ್ಯಾಪ್ತಿಯ ರಸ್ತೆ ವಿಭಜಕದಲ್ಲಿ ಬೆಳೆದು ನಿಂತಿರುವ ಸಾಗುವಾನಿ ಗಿಡಗಳನ್ನು ತೆರವು ಗೊಳಿಸಿ ಅದೇ ಸ್ಥಳದಲ್ಲಿ ಗಾರ್ಡನ್ ಗಿಡಗಳನ್ನು ನೆಡಬೇಕು. ಡಾ.ದಿನಕರ ದೇಸಾಯಿ ರಸ್ತೆಯಲ್ಲಿ ರಸ್ತೆಯ ಅಕ್ಕ ಪಕ್ಕದ ಚರಂಡಿ ಅತಿಕ್ರಮಣ ಮಾಡಿದವರಿಗೆ ನೋಟೀಸ್ ನೀಡಿ, ಖುಲ್ಲಾಪಡಿಸಿಬೇಕು. ಇದರಿಂದಾಗಿ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿಗಳನ್ನು ಕೂಡಲೇ ಸರಿಪಡಿಸಬೇಕು ಎಂದು ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಅವರು ಪುರಸಭೆ ಮುಖ್ಯಾಧಿಕಾರಿಯವರಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ಕಚೇರಿಯ ನ್ಯಾಯಾಲಯದ ಸಭಾಭವನದಲ್ಲಿ ಶುಕ್ರವಾರ ಕರೆದ ಮಳೆಗಾಲದ ನಿರ್ವಹಣೆ ಯ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸಲು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಪುರಸಭೆ, ಶಿಕ್ಷಣ ಇಲಾಖೆ ಇನ್ನಿತರ ಇಲಾಖೆಗಳು ಅರಣ್ಯ ಇಲಾಖೆಗೆ ಪತ್ರ ಬರೆದು ಸುಮ್ಮನಿದ್ದರೆ ಆಗುವದಿಲ್ಲ. ಅವರೊಂದಿಗೆ ಸ್ವತಃ ಅಥವಾ ಫೋನ್ ಮೂಲಕ ಸಂಪರ್ಕಿಸಿ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ಆದ್ಯತೆಯ ಮೇರೆಗೆ ಮರಗಳನ್ನು ಅಥವಾ ಟೊಂಗೆಗಳನ್ನು ತೆರವು ಗೊಳಿಸುವದು ಸೂಕ್ತ. ಖಾಸಗಿ ಜಮೀನಿನಲ್ಲಿ ಅಥವಾ ಬೇರೆ ಇಲಾಖೆಯ ಜಮೀನಿನ ಲ್ಲಿ ರುವ ಮರಗಳನ್ನು ತೆರವುಗೊಳಿಸಲು ಕೆಲವು ನಿಯಮಗಳಿರುತ್ತವೆ, ಅವರೂ ಕೂಡ ಸಹಕರಿಸಬೇಕು. ಶಾಲಾ ಕಂಪೌಂಡಿನೊಳಗಿನ ತೆಂಗಿನ ಮರ ಅಥವಾ ಹಣ್ಣಿನ ಮರಗಳಿಗೆ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಲ್ಲ. ಎಸ್‌ಡಿಎಂಸಿ ಠರಾವು ಮಾಡಿ ಕಟಾವು ಮಾಡಬಹುದು ಎಂದರು.
ಹೆಸ್ಕಾಂ ಅಭಿಯಂತರ ಪ್ರವೀಣ ನಾಯ್ಕ ಮಾತನಾಡಿ, ಬಾಳೆಗುಳಿಯಿಂದ ಸುಂಕಸಾಳದವರೆಗೆ ಮತ್ತು ಮಾದನಗೇರಿಯಿಂದ ಹಿಲ್ಲೂರಿನವರೆಗಿನ ಹೆದ್ದಾರಿಗುಂಟ ಒಟ್ಟೂ 121 ಲೊಕೇಶನಗಳನ್ನು ಗುರುತಿಸಲಾಗಿದೆ. ಮಳೆಯ ಪ್ರಮಾಣ ತಗ್ಗಿದ ಮೇಲೆ ಕಟಿಂಗ್ ಮಾಡಲಾಗುವದು ಎಂದರು.
ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ ಮಾತನಾಡಿ, ಪುರಸಭೆಯ ವ್ಯಾಪ್ತಿಯಲ್ಲಿನ ಮರಗಳ ತೆರವಿಗೆ ಬೇಡಿಕೆ ಬಂದರೆ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಅವರು ಕೇಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಇರುವ ಬೃಹತ್ ಮರವನ್ನು ತೆರವುಗೊಳಿಸಿಕೊಡುವಂತೆ ವಿನಂತಿಸಿದರು. ಇನ್ನುಳಿದ ಶಾಲೆಗಳ ಮೇಲೆ ಇರುವ ಮರಗಳ ಪಟ್ಟಿ ಮಾಡಲಾಗಿದ್ದು ಪರಿಶೀಲನೆಯಲ್ಲಿದೆ ಎಂದರು.
ಶಿರಸ್ತೇದಾರ ಗಿರೀಶ ಜಾಂಬಾವಳಿಕರ, ಆರ್‌ಎಫ್‌ಒ ಪ್ರಮೋದ ನಾಯಕ, ಸಿಡಿಪಿಒ ಇಲಾಖೆಯ ಸವಿತಾ ನಾಯ್ಕ, ತಾಪಂ ಪ್ರಭಾರ ಅಧಿಕಾರಿ ನಾಗರಾಜ ನಾಯ್ಕ, ಲೋಕೋಪಯೋಗಿ ಇಲಾಖೆ ಅಧಿಕಾರಿ ಉಪಸ್ಥಿತರಿದ್ದರು.