ಜಿಲ್ಲೆ

ಬೆಳೆ ಕಟಾವು ಪ್ರಯೋಗದ ವಿವರ ನಮೂದಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಳೆ ಕಟಾವು ಪ್ರಯೋಗವನ್ನು ತರಬೇತಿ ಪಡೆದಿರುವ ಮೂಲ ಕಾರ್ಯಕರ್ತರು ಮಾತ್ರ ನಡೆಸಿ ಆ ವಿವರವನ್ನು ಸಂಬಂಧಿಸಿದ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬೆಳೆ ಕಟಾವು ಪ್ರಯೋಗ, ಕೃಷಿ ಅಂಕಿ-ಅಂಶ ಹಾಗೂ 11ನೇ ಕೃಷಿ ಗಣತಿ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳೆ ಕಟಾವು ಪ್ರಯೋಗವನ್ನು ರೈತರಿಗೆ ಬೆಳೆ ವಿಮೆ ನೀಡುವ ಸಂಬಂಧ ನಡೆಸಲಾಗುವುದು. ಪ್ರಯೋಗದಲ್ಲಿ ನಿಖರ ಮಾಹಿತಿಯನ್ನು ನೀಡಬೇಕು ಎಂದರು.

ಎಳ್ಳು ಮತ್ತು ಅಲಸಂದೆ ಬೆಳೆಯ ಕಟಾವು ಪ್ರಯೋಗಗಳಿಗೆ ಸಂಬಂಧಿಸಿದಂತೆ ನಮೂನೆ 1 ಅನ್ನು ಭರ್ತಿ ಮಾಡಬೇಕಿದ್ದು, ನಿಗದಿತ ಸಮಯದಲ್ಲಿ ವರದಿಯನ್ನು ಭರ್ತಿ ಮಾಡಬೇಕು. ಒಂದು ವೇಳೆ ಕೆಲಸದಲ್ಲಿ ಲೋಪಗಳು ಕಂಡುಬಂದಲ್ಲಿ ಶಿಸ್ತು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ಮೂಲ ಕಾರ್ಯಕರ್ತರ ಕೆಲಸಗಳನ್ನು ಪರಿಶೀಲಿಸಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ತಪ್ಪದೇ ಪರಿಶೀಲಿಸಿ ವರದಿ ನೀಡಬೇಕು. ಪ್ರತಿ ಮಾಹೆ ತಾಲೂಕು ಮಟ್ಟದಲ್ಲಿ ಬೆಳೆ ಕಟಾವು ಪ್ರಯೋಗದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಬೇಕು. ಮರಣ ಹೊಂದಿರುವ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಅವರ ಸಂಬಂಧಿಕರು ತೆಗೆಸುವುದಿಲ್ಲ. ಆದ್ದರಿಂದ ತಾಲೂಕು ಹಾಗೂ ಗ್ರಾಮವಾರು ಪಟ್ಟಿ ಮಾಡಿ ಮರಣ ಹೊಂದಿರುವವರ ಪ್ರಮಾಣ ಪತ್ರವನ್ನು ಒದಗಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸೀಫ್, ಜಂಟಿ ಕೃಷಿ ನಿರ್ದೇಶಕ ವಿ.ಆಶೋಕ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಶಿವಮ್ಮ, ನಾಗಮಂಗಲ ಉಪ ತಹಸೀಲ್ದಾರ್ ಸ್ವಾಮಿಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಾಲತಿ, ಕೃಷಿ ಇಲಾಖೆಯ ಅಧಿಕಾರಿಗಳಾದ ಸೌಮ್ಯ, ಮಮತಾ ಇತರರಿದ್ದರು.