ಎಚ್.ಡಿ.ಕೋಟೆ ತಾಲೂಕು ಕ್ರೀಡಾಂಗಣದಲ್ಲಿ ಕೋಟೆ ಅರ್ಜುನ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀ ಕಾಂತ್ ರೆಡ್ಡಿ ಚಾಲನೆ ನೀಡಿದರು. ವಿಷ್ಣುವರ್ಧನ್, ಗಾಯತ್ರಿ, ಅನಿಲ್ ಚಿಕ್ಕಮಾದು ಇದ್ದರು.  
ಜಿಲ್ಲೆ

ಕ್ರೀಡಾಕೂಟಗಳಿಂದ ಅಧಿಕಾರಿಗಳು, ನೌಕರರ ನಡುವೆ ಸಮನ್ವಯ

ಎಚ್.ಡಿ.ಕೋಟೆ: ಕ್ರೀಡಾಕೂಟಗಳು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರ ನಡುವೆ ಸಮನ್ವಯ ಮೂಡಿಸುತ್ತವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದರು.


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ದಸರಾ ಅಂಗವಾಗಿ ಶನಿವಾರ ಆಯೋಜಿಸಿದ್ದ ಕೋಟೆ ಅರ್ಜುನ ಕಪ್ ಕ್ರಿಕೆಟ್ ಪಂದ್ಯಾವಳಿಯ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಅಂಬಾರಿ ಆನೆ ಅರ್ಜುನನ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಅರ್ಜುನ ಆನೆಗೆ ಗೌರವ ಸಲ್ಲಿಸಲಾಗಿದೆ ಎಂದು ತಿಳಿಸಿದರು.


ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಲ್ಲಿ ಪರಸ್ಪರ ಸ್ನೇಹ ಬೆಳೆಯುವಂತೆ ಮಾಡಿದೆ. ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರಿಗೆ ಈ ಕ್ರೀಡೆಯಿಂದ ಮನಸ್ಸಿಗೆ ಉಲ್ಲಾಸ ತರುವಂತಾಗುತ್ತದೆ ಎಂದರು.


ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೋಲು, ಗೆಲುವಿಗಿಂತ ಭಾಗವಹಿಸುವುದು ಮುಖ್ಯವಾಗಿದೆ ಎಂದು ಹೇಳಿದರು.


ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಕಳೆದ ಡಿಸೆಂಬರ್ ತಿಂಗಳಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾಡಾನೆ ಸೆರೆಹಿಡಿಯುವ ಸಂದರ್ಭದಲ್ಲಿ ದಸರಾ ಆನೆ ಅರ್ಜುನ ಕಾದಾಟದಲ್ಲಿ ಮೃತಪಟ್ಟಿತ್ತು. ರಾಜ್ಯ ಸೇರಿದಂತೆ ದೇಶದ ಜನರು ದುಃಖ ವ್ಯಕ್ತಪಡಿಸಿದ್ದರು. ಆಕರ್ಷಕವಾಗಿದ್ದ ಅರ್ಜುನ ಆನೆ ಹಲವಾರು ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅರಣ್ಯ ಇಲಾಖೆ ಹಾಗೂ ಜನರ ಪ್ರೀತಿಗೆ ಪಾತ್ರವಾಗಿತ್ತು. ಜನರ ಮನಸ್ಸಿನಲ್ಲಿ ಅಚ್ಚುಳಿಯುವಂತೆ ಪ್ರತಿವರ್ಷ ಆನೆಯ ಸ್ಮರಣಾರ್ಥ ಕೋಟೆ ಅರ್ಜುನ ಕಪ್ ಕ್ರೀಡಾಕೂಟವನ್ನು ಏರ್ಪಡಿಸಲಾಗುತ್ತದೆ. ಬಳ್ಳೆ ಶಿಬಿರದಲ್ಲಿ ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೂ ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.


ಕಂದಾಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ವಕೀಲರು, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಗಳು, ರಾಜಕಾರಣಿಗಳು, ಪತ್ರಕರ್ತರು, ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ನಾಲ್ಕು ಪಂದ್ಯಾವಳಿ ನಡುವೆ ಭಾರಿ ಮಳೆ ಸುರಿದ ಕಾರಣ ಪಂದ್ಯಾವಳಿಗಳನ್ನು ಭಾನುವಾರಕ್ಕೆ ಮುಂದೂಡಲಾಯಿತು.


ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ, ಜಿಲ್ಲಾ ಆರೋಗ್ಯಾಧಿಕಾರಿ ಕುಮಾರಸ್ವಾಮಿ, ಡಿಡಿಪಿಐ ಜವರೇಗೌಡ, ಉಪಅರಣ್ಯ ಸಂರಕ್ಷಣಾ ಅಧಿಕಾರಿ ಸೀಮಾ, ಡಿವೈಎಸ್ಪಿ ಗೋಪಾಲಕೃಷ್ಣ, ತಹಸೀಲ್ದಾರ್ ಶ್ರೀನಿವಾಸ್, ಇಒ ಧರಣೀಶ್, ಶಬ್ಬೀರ್ ಹುಸೇನ್, ಪ್ರಕಾಶ್, ಡಾ.ರವಿಕುಮಾರ್, ಡಾ.ಶ್ರೀನಿವಾಸ್ ಇತರರು ಇದ್ದರು.


ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನವಾಗಿ ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ಪಾರಿತೋಷಕ, ಎರಡನೇ ಬಹುಮಾನ 50 ಸಾವಿರ ರೂ.ಹಾಗೂ ಪಾರಿತೋಷಕ ನೀಡಲಾಗುವುದು.