ಜಿಲ್ಲೆ

ಅಧಿಕಾರಿಗಳ ಜತೆ ಸಮನ್ವಯತೆ ಹೊಂದಿ

ಎಸ್.ಎರ್ರಿಸ್ವಾಮಿ

ಬಳ್ಳಾರಿ ; ಜಿಲ್ಲೆಯ ನಾನಾ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಜು 5ರಂದು ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಮಿಕ ಅಧಿಕಾರಿಗಳ ಜತೆಗೂಡಿ ಇಲಾಖೆಗಳ ಅಧಿಕಾರಿಗಳ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಈ.ತುಕಾರಾಮ್ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಕಾರ್ಮಿಕರಿಗೆ ಸೌಲಭ್ಯ ವಿತರಿಸುವ ಕುರಿತಂತೆ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇಲ್ಲಿನ ವಾಲ್ಮೀಕಿ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲೆಯ ನಾನಾ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಕಾರ್ಯಕ್ರಮವು ಬಡ ಕಾರ್ಮಿಕರಿಗೆ ನೆರವು ನೀಡುವ ಮತ್ತು ಸರ್ಕಾರದ ಆಶೋತ್ತರ ಕಾರ್ಯಕ್ರಮವಾಗಿದ್ದು, ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕ 28 ವಿವಿಧ ವರ್ಗಗಳಡಿ ನೋಂದಾಯಿಸಿಕೊಂಡ 2,600 ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತದೆ. ವಿವಿಧೆಡೆಯಿಂದ ಸಾರ್ವಜನಿಕರನ್ನು ಕರೆತರಲು 28 ಬಸ್, 15 ಕ್ರೂಸರ್ ವಾಹನ, 500 ಆಟೋಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು. ಬ್ಯಾನರ್‌ಗಳನ್ನು ಅಧಿಕೃತ ಸ್ಥಳಗಳಲ್ಲಿಯೇ ಹಾಕಬೇಕು. ನಗರದ ಸುಂದರೀಕರಣಕ್ಕೆ ಧಕ್ಕೆಯಾಗಬಾರದು ಎಂದರಲ್ಲದೇ, ಕಾರ್ಮಿಕ ಇಲಾಖೆಯ ರಾಜ್ಯ ಮತ್ತು ಜಿಲ್ಲೆಯ ಸಮಗ್ರ ಮಾಹಿತಿಯನ್ನು ಸಿದ್ಧತೆಯಲ್ಲಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಮಿಕ ಇಲಾಖೆಯ ಕ್ಲಿನಿಕ್ ಆನ್ ವೀಲ್ ಆರೋಗ್ಯ ಸಂಚಾರಿ ವಾಹನಗಳ ಚಾಲನೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ನಿರ್ದೇಶಿಸಿದರು.