ಜಿಲ್ಲೆ

ನೌಕರರ ಬಲವರ್ಧನೆಗೆ ಸಹಕಾರ ಸಂಘಗಳು ಸಹಕಾರಿ

ಕಿರಣ್ ಗೌಡ.ಜಿ

 ಎಚ್.ಡಿ.ಕೋಟೆ: ಸಹಕಾರ ಸಂಘವು ನೌಕರರಿಗೆ ಆರ್ಥಿಕ ಭದ್ರತೆ, ಸುರಕ್ಷತೆ, ಸಾಲ ಮತ್ತು ಲಾಭಾಂಶದ ರೂಪದಲ್ಲಿ ಆರ್ಥಿಕ ಬಲವರ್ಧನೆಗೆ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಸಿ.ಎನ್.ರಾಜು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಉಪಾಧ್ಯಾಯರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಕೈ ತುಂಬ ಸಂಬಳ ಬರುತ್ತಿದೆ. ಎಲ್ಲ ಶಿಕ್ಷಕರು ಕಡ್ಡಾಯವಾಗಿ ಎಫ್‌ಡಿ ಇಡಬೇಕೆಂದು ಕಿವಿಮಾತು ಹೇಳಿದರು.

ಷೇರುದಾರರಾದ ರಂಗಸ್ವಾಮಿಶೆಟ್ಟಿ ಮಾತನಾಡಿ, ಸಾಲದ ಗರಿಷ್ಠ ಮೊತ್ತ ಕಡಿಮೆ ಇದ್ದ ಸಂದರ್ಭದಲ್ಲಿ ಲಾಭಾಂಶದ ಪ್ರಮಾಣ ಏರಿಕೆಯಾಗಿತ್ತು. ಆದರೆ ಈಗ ಗರಿಷ್ಠ ಮೊತ್ತವನ್ನು 3 ಲಕ್ಷ ರೂ.ಗೆ ಏರಿಕೆಯಾಗಿದ್ದರೂ ಸಂಘದ ವಾರ್ಷಿಕ ನಿವ್ವಳ ಲಾಭಾಂಶ ಕಡಿಮೆಯಾಗಿದೆ. ಇದಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಕೆಂಪರಾಜು ಅವರು, ಸಹಕಾರ ಸಂಘದಲ್ಲಿ ಈ ಹಿಂದೆ ಕಚೇರಿ ಗುಮಾಸ್ತರಾಗಿದ್ದ ರಾಜಪ್ಪ ಅವರ ಹುದ್ದೆಯನ್ನು ವೇತನ ಕಾರ್ಯದರ್ಶಿಯಾಗಿ ತದ ನಂತರ ಸಿಇಒ ಹುದ್ದೆಗೆ ಏರಿಸಿರುವ ಹಿಂದಿನ ಆಡಳಿತ ಮಂಡಳಿಯ ಕ್ರಮ ಕಾನೂನು ಬಾಹಿರವಾಗಿದೆ. ನಮ್ಮ ಸಂಘದ ಲಾಭಾಂಶವೆಲ್ಲವೂ ಈಗ ಸಿಇಒಗೆ ಮಾಸಿಕ 49,852 ರೂ.ರಂತೆ ಹೋಗುತ್ತಿದ್ದು, ಇದು ಸಂಘ ಆರ್ಥಿಕ ಹೊರೆಗೆ ಕಾರಣವಾಗಿದೆ. ಹೀಗಾಗಿ ಸಿಇಒ ಹುದ್ದೆಯನ್ನು ರದ್ದುಗೊಳಿಸಿ, ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಆಡಳಿತ ಮಂಡಳಿಯ ಒಪ್ಪಿಗೆ ಕೇಳಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು. ಮುಂದಿನ ಮಾಸಿಕ ಸಭೆಯಲ್ಲಿ ಸಿಇಒ ಅವರನ್ನು ಅಮಾನತುಗೊಳಿಸಿ ಉನ್ನತ ತನಿಖೆಗೆ ಒಪ್ಪಿಸುತ್ತೇವೆಂದು ನಿರ್ದೇಶಕ ಯಶ್ವಂತ್ ಕುಮಾರ್ ಸೂಚಿಸಿದರು.

ಶಿಕ್ಷಣ ಇಲಾಖೆಯಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಅಮಾನತುಗೊಂಡ ನೌಕರರ ಷೇರು, ಸದಸ್ಯತ್ವ ಹಾಗೂ ಹುದ್ದೆಯನ್ನು ಅಸಿಂಧುಗೊಳಿಸಬಾರದು. ಇಲಾಖೆಯಲ್ಲಿ ವಜಾಗೊಂಡ ನೌಕರರಿಗೆ ಮಾತ್ರ ಸದಸ್ಯತ್ವ ರದ್ದುಗೊಳಿಸಲು ಅವಕಾಶ ಇರುತ್ತದೆ ಎಂದು ಬೈಲಾ ತಿದ್ದುಪಡಿ ಮಾಡಲಾಯಿತು.

ಉಪಾಧ್ಯಕ್ಷ ನಾಗನಾಯಕ, ನಿರ್ದೇಶಕ ನಾಗೇಶ ಬಿ.ಎಂ, ಪಟ್ಟಾಚಾರಿ, ಮಂಜುನಾಥ್ ವಿ.ಆರ್. ಲೇಪಾಕ್ಷಿ, ಕೆಂಪನಾಯಕ, ಎಸ್.ರವಿ, ಬಂಗಾರಯ್ಯ, ಮಹೇಶ ಎಸ್.ಬಿ, ಮಹದೇವಸ್ವಾಮಿ ಎನ್.

ಸವಿತಾ, ರಾಜೇಶ್ವರಿ, ಶಿವಕುಮಾರ ಇದ್ದರು.