ಜಿಲ್ಲೆ

ಸಹಕಾರಿಗಳಿಗೆ ಸಹಕಾರ ಕಾಯ್ದೆಯ ಅರಿವು ಅಗತ್ಯ : ಎಚ್.ವಿ.ರಾಜೀವ್

ಸದೇಶ್ ಕಾರ್ಮಾಡ್

ಮೈಸೂರು: ಸಹಕಾರ ಕ್ಷೇತ್ರದ ಕಾಯ್ದೆಗಳು ಹಾಗೂ ಆಗಿಂದಾಗೆ ಕಾಯ್ದೆಗಳಿಗೆ ಆಗುವ ತಿದ್ದುಪಡಿ ಕುರಿತು ಮಾಹಿತಿ ಹೊಂದಿದ್ದರೆ ಮಾತ್ರ ಸಹಕಾರ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಇಲ್ಲವಾದಲ್ಲಿ ಉತ್ತಮವಾಗಿ ಮುನ್ನಡೆಯುತ್ತಿರುವ ಸಹಕಾರ ಸಂಘಗಳು ಸಹ ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮಾಜಿ ನಿರ್ದೇಶಕ ಎಚ್.ವಿ. ರಾಜೀವ್ ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ಮತ್ತು ಕೊಡಗು ಸೌಹಾರ್ದ ಸಹಕಾರಿಗಳಿಗೆ ಹಮ್ಮಿಕೊಂಡಿದ್ದ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.

ಸಹಕಾರ ಸಂಘಗಳು ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಸಹಕಾರಿಗಳ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಪ್ರತಿ ತಿಂಗಳು ತಪ್ಪದೆ ಸಭೆ ನಡೆಸಬೇಕು. ಪ್ರತಿ ತಿಂಗಳು ಸಭೆ ಸೇರಿದಾಗ ಹೊಸ ಆಲೋಚನೆಗಳು ಮೂಡುತ್ತವೆ. ಇಲ್ಲವಾದಲ್ಲಿ ಸಂಘಗಳು ನಿಷ್ಕ್ರೀಯವಾಗು ವುದು ನಿಶ್ಚಿತ ಎಂದರು.

ಸಹಕಾರ ಸಂಘಗಳು ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತರಾಗಬಾರದು. ಸಂಘದ ಜವಾಬ್ದಾರಿಯನ್ನು ಸಾಮೂಹಿಕವಾಗಿ ವಹಿಸಿಕೊಳ್ಳಬೇಕು. ಒಬ್ಬರ ಮೇಲೆ ಅವಲಂಬಿತವಾಗುವ ಸಂಘಗಳು ಸಮಸ್ಯೆಗೆ ಸಿಲುಕುವ ಆತಂಕ ಇದೆ ಎಂದು ಹೇಳಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತೀಯ ಅಧಿಕಾರಿ ಶಿವಕುಮಾರ ಬಿರಾದಾರ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಸೌಹಾರ್ದ ಅಭಿವೃದ್ಧಿ ಅಧಿಕಾರಿ ಜವಾಹರ ಮುಗ್ಗನವರ, ಮೈಸೂರು, ಮಂಡ್ಯ ಮತ್ತು ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್. ನಾರಾಯಣರಾವ್, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಕಚೇರಿ ಜಂಟಿ ನಿರ್ದೇಶಕ ರವಿ, ಸಂಪನ್ಮೂಲ ವ್ಯಕ್ತಿ ಸುಭಾಷ ಹೆಗಡೆ ಹಾಗೂ ಇತರರು ಇದ್ದರು.