ಜಿಲ್ಲೆ

ಸಹಕಾರಿ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಹಾಮಂಡಳ ಚುನಾವಣೆ: ಉಮೇಶ್ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಮಂಡ್ಯ: ಸಹಕಾರಿ ಸಾವಯವ ಕೃಷಿ ಉತ್ಪನ್ನಗಳ ಮಾರಾಟ ಮಹಾಮಂಡಳದ ರಾಜ್ಯಾಧ್ಯಕ್ಷರಾಗಿ ನಾಗಮಂಗಲ ತಾಲೂಕು ಇಜ್ಜಲಘಟ್ಟದ ಇ.ಎನ್.ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಪ್ರಸ್ತುತ ಮೈಸೂರು ವಿಭಾಗದ ಅಧ್ಯಕ್ಷರಾಗಿದ್ದಾರೆ.

ಬೆಂಗಳೂರಿನ ಬನಶಂಕರಿಯಲ್ಲಿರುವ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇ.ಎನ್.ಉಮೇಶ್ ಮಾತ್ರ ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅವಿರೋಧದ ಆಯ್ಕೆಯನ್ನು ಘೋಷಣೆ ಮಾಡಿದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಉಮೇಶ್, ಸಾವಯವ ಕೃಷಿ ಉತ್ಪನ್ನಗಳಿಗೆ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಪೂರಕವಾಗಿ ಸಾವಯವ ಕೃಷಿ ಬೆಳೆಯುವ ರೈತರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವಾರು ಸವಲತ್ತು ನೀಡುತ್ತಿದೆ. ಇದರ ಜತೆಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ರಾಜ್ಯದ ಸಾವಯವ ಕೃಷಿ ಉತ್ಪನ್ನಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಲು ತರಬೇತಿ ಹಾಗೂ ಕೃಷಿ ಇಲಾಖೆ, ಸಾವಯವ ಕೃಷಿ ಉತ್ಪನ್ನ ಮಾರಾಟ ಮಹಾಮಂಡಲದ ಸಹಯೋಗದಲ್ಲಿ ರಾಜ್ಯಾದ್ಯಂತ ಸಾವಯವ ಕೃಷಿ ಉತ್ಪನ್ನ ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಿದ್ದಾರೆ ಎಂದು ವಿವರಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ವಿಶೇಷ ಕಾಳಜಿ ಹಾಗೂ ದೂರದೃಷ್ಟಿಯಂತೆ ಸಾವಯವ ರೈತರು ಮತ್ತು ಸಾವಯವ ಕೃಷಿ ಉತ್ಪನ್ನಗಳ ಬಳಕೆದಾರರಿಗಾಗಿ ಅನುಕೂಲವಾಗುವಂತ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ತಕ್ಕಂತೆ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.

ನೂತನ ಅಧ್ಯಕ್ಷರನ್ನು ರಾಜ್ಯ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ಮಂಜುನಾಥ್‌ಗೌಡ, ಮಹಾಮಂಡಳದ ಉಪಾಧ್ಯಕ್ಷ ಶಿವಕುಮಾರ್, ನಿರ್ದೇಶಕರು ಟಿ.ಕೃಪ, ಭರ್ಮಪ್ಪ, ವೆಂಕಟರಾಮರೆಡ್ಡಿ, ಶ್ರೀರಾಮರೆಡ್ಡಿ, ಚಂದ್ರಕಾಂತ ಸದಾಶಿವಪ್ಪ, ಎಚ್.ಸಿ.ಬಸವರಾಜಪ್ಪ, ವಿಶ್ವೇಶ್ವರ ರಾಮಕೃಷ್ಣ ಭಟ್, ಎಸ್.ನಾಗರಾಜು ಅಭಿನಂದಿಸಿದರು.