ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್. 
ಜಿಲ್ಲೆ

ಸಹಕಾರಿ ನಾಡಾಗಲಿದೆ ಸಕ್ಕರೆ ಜಿಲ್ಲೆ

ಶಂಕರ ಗೆಜ್ಜಿ

ಬೆಳಗಾವಿ: ಗ್ರಾಮೀಣ ಭಾಗದ ಆರ್ಥಿಕ ಸ್ಥಿತಿಗತಿಯ ಗಮನಾರ್ಹ ಸುಧಾರಣೆಗೆ ಕಾರಣವಾಗಿರುವ ಸಹಕಾರಿ ಸಂಘಗಳನ್ನು ರೈತಾಪಿ ಜನರ ಆತ್ಮ ಎಂದು ಕರೆಯಲಾಗುತ್ತದೆ. ಸಹಕಾರಿ ಸಂಘವೊಂದು ಸುಸ್ಥಿತಿಯಲ್ಲಿದ್ದರೆ ಗ್ರಾಮವೊಂದು ಅಭಿವೃದ್ಧಿಯತ್ತ ದಾಪುಗಾಲಿಡಬಹುದು. ಆ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, 10 ಗ್ರಾಪಂ ವ್ಯಾಪ್ತಿಯಲ್ಲಿ ಹೊಸ ಪಿಕೆಪಿಎಸ್‌ಗಳು ತಲೆ ಎತ್ತಲಿವೆ.

ಸಹಕಾರ ರಂಗ ಸುಧಾರಣೆಗೆ ಕ್ರಮ: ಇಪ್ಪತ್ತೈದಕ್ಕೂ ಅಧಿಕ ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಸಕ್ಕರೆ ಜಿಲ್ಲೆ ಬೆಳಗಾವಿ ಇನ್ನು ಮುಂದೆ ಸಂಪೂರ್ಣವಾಗಿ ಸಹಕಾರಿ ಜಿಲ್ಲೆಯೂ ಆಗಲಿದೆ. ಶೀಘ್ರವೇ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಸಹಕಾರಿ ಸೌಲಭ್ಯಗಳು ಕೈಗೆಟುಕಲಿದ್ದು, ಕಾರ್ಯಕ್ಷೇತ್ರ ವಿಸ್ತರಣೆ ಜತೆಗೆ ಈಗಾಗಲೇ ಇರುವ ಪಿಕೆಪಿಎಸ್‌ಗಳ ಸಮೇತ ಸಹಕಾರಿ ರಂಗ ಬಲವರ್ಧನೆಗೊಳ್ಳುವ ಆಶಾವಾದ ಮೂಡಿದೆ. ವಿವಿಧೋದ್ದೇಶದ ಪ್ರಾಥಮಿಕ ಸಹಕಾರ ಸಂಘಗಳು ಅಥವಾ ಡೇರಿ, ಮೀನುಗಾರಿಕೆಗೆ ಪ್ರಾಥಮಿಕ ಸಹಕಾರ ಸಂಘಗಳು ಇಲ್ಲದಿರುವ ಪಂಚಾಯಿತಿ ಅಥವಾ ಗ್ರಾಮಗಳಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆರಂಭಿಸಲು ಸಹಕಾರ ಸಚಿವಾಲಯ ನೀಡಿರುವ ಸೂಚನೆ ಮೇರೆಗೆ ರಾಜ್ಯ ಸಹಕಾರ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ರಾಜ್ಯದಲ್ಲಿ ಸಹಕಾರಿ ಆಂದೋಲನ ಆರಂಭಗೊಂಡಾಗಿನಿಂದ ಈವರೆಗೆ ಜಿಲ್ಲಾದ್ಯಂತ ಸಾವಿರಾರು ಸಹಕಾರಿಗಳು ಜನ್ಮ ತಳೆದಿದ್ದರೂ, ಗಡಿಜಿಲ್ಲೆಯ ಹಲವು ಗ್ರಾಮಗಳಲ್ಲಿ ಪಿಕೆಪಿಎಸ್‌ಗಳೇ ಇಲ್ಲ. ಆದರೆ, ಇದೀಗ ಆ ಗ್ರಾಮಗಳಿಗೂ ಸಹಕಾರಿ ಭಾಗ್ಯ ಒಲಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಒಟ್ಟು 10 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಪಿಕೆಪಿಎಸ್‌ಗಳು ಆರಂಭವಾಗಲಿವೆ.

ಸೌಲಭ್ಯ ತಲುಪಿಸಲು ಮುಂದಡಿ: ಒಂದು ಪಿಕೆಪಿಎಸ್ ಸ್ಥಾಪನೆಗೆ ಅದರ ಕ್ಷೇತ್ರ ವ್ಯಾಪ್ತಿಯಲ್ಲಿ 4 ಸಾವಿರ ಎಕರೆ ಸಾಗುವಳಿ ಭೂಮಿ ಹಾಗೂ 600 ರೈತ ಕುಟುಂಬಗಳು ಇರಲೇಬೇಕೆಂಬ ನಿಯಮವಿದೆ. ಆದರೆ, ಜಿಲ್ಲೆಯ 510 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒಟ್ಟು 1,324 ಪಿಕೆಪಿಎಸ್‌ಗಳಿದ್ದು, ಬಹುತೇಕ ಸಹಕಾರಿಗಳು ಅವ್ಯವಹಾರ, ವಸೂಲಿಯಾಗದ ಸಾಲ ಹಾಗೂ ಮುಖಂಡರ ರಾಜಕೀಯ ಹಸ್ತಕ್ಷೇಪ ಸೇರಿ ಹತ್ತಾರು ಕಾರಣಗಳಿಂದ ದಿವಾಳಿಯಾಗಿ ನಿಷ್ಕ್ರಿಯಗೊಂಡಿವೆ. ಈ ನಡುವೆ, ಎಲ್ಲ ಗ್ರಾಪಂ ವ್ಯಾಪ್ತಿಯಲ್ಲೂ ಪಿಕೆಪಿಎಸ್ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ವಿತರಿಸುವ ದೂರದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನುತ್ತಾರೆ ಅಧಿಕಾರಿಗಳು.

ರಾಜಕೀಯದಿಂದ ಮುಕ್ತವಾಗಲಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಕೇವಲ ಕ್ಷೇತ್ರ ವಿಸ್ತರಿಸುವುದರಿಂದ ಯಾವುದೇ ಪ್ರಯೋಜನವಾಗದು. ಈಗಾಗಲೇ, ಪ್ರತಿ ಊರಿನಲ್ಲೂ ರಾಜಕೀಯ ಪಕ್ಷಕ್ಕೊಂದು-ಮುಖಂಡರಿಗೊಂದು ಎನ್ನುವಂತೆ ಐದಾರೂ ಪಿಕೆಪಿಎಸ್‌ಗಳಿವೆ. ಅವುಗಳ ಕಚೇರಿ ಕಾರ್ಯಾಭಾರ ಇಲ್ಲದಿದ್ದರೂ ದಾಖಲೆಗಳಲ್ಲಿ ಹೆಚ್ಚಿವೆ. ಒಂದಕ್ಕೆ ಮತ್ತೊಂದು ಎಂಬಂತೆ ಸಹಕಾರಿಗಳ ಸಂಖ್ಯೆಯೂ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಸಹಕಾರಿಗಳು ರಾಜಕೀಯಂದ ಮುಕ್ತಗೊಂಡಾಗ ಅಭಿವೃದ್ಧಿ ಸಾಧ್ಯ ಎಂದರು.

ವಿಭಜನೆ ತೂಗುಗತ್ತಿ!

ಪ್ರತಿ ಗ್ರಾಮದಲ್ಲೂ ಸಹಕಾರಿ ಸ್ಥಾಪನೆಯ ಬಗ್ಗೆ ಇನ್ನಿತರ ಜಿಲ್ಲೆಗಳಲ್ಲಿನ ಪರಿಣಾಮಗಳನ್ನು ಜಿಲ್ಲೆಯ ಹೊರಗಡೆ ಈ ನಾಲ್ಕೈದು ಗ್ರಾಮಗಳಿಗೂ ಸಾಲ ಸೌಲಭ್ಯ ಒದಗಿಸುತ್ತಿರುವ, ಲಾಭದಲ್ಲಿ ಮುನ್ನಡೆಯುತ್ತಿರುವ ದೊಡ್ಡ ಸಹಕಾರಿಯನ್ನು ವಿಭಜಿಸಲೆಂದೇ ಈ ಕ್ರಮ ಕೈಗೊಳ್ಳಲಾಗುತ್ತಿದೆ. ನಷ್ಟದ ಕಾರಣವೊಡ್ಡಿ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನೇ ಕೇಂದ್ರ ಸರ್ಕಾರ ವಿಲೀನಗೊಳಿಸಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕೋಟ್ಯಂತರ ರೂ.ಠೇವಣಿ ಪಡೆದಿರುವ ಸಹಕಾರಿಗಳು ಸಾಲ ವಸೂಲಿಯಾಗದೇ ದಿವಾಳಿಯಾಗುತ್ತಿರುವಾಗ ಹಾಗೂ ಕೃಷಿ ಸಾಲ ಪಡೆಯುವವರೆ ಇಲ್ಲದ ಪರಿಸ್ಥಿತಿಯಲ್ಲಿ ಪ್ರತಿ ಗ್ರಾಮದಲ್ಲಿ ಸಂಘವನ್ನು ಸ್ಥಾಪಿಸುವ ಉದ್ದೇಶವೇ ಅರ್ಥವಾಗುತ್ತಿಲ್ಲ ಎಂಬ ಜಿಜ್ಞಾಸೆಯೂ ಸಹಕಾರಿ ಧುರೀಣರಲ್ಲಿ ಮೂಡಿದೆ.

ಯೂರೋಪಿಯನ್ ಮಾದರಿ ನಮ್ಮಲ್ಲೂ ಜಾರಿಯಾಗಲಿ

ಸಹಕಾರಿ ಸಂಘಗಳ ಬಲವರ್ಧನೆ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ರಾಜ್ಯದಲ್ಲಿ ಯುರೋಪಿಯನ್ ಮಾದರಿಯ ಸಹಕಾರಿ ನಿಯಮಗಳನ್ನು ಜಾರಿಗೊಳಿಸಬೇಕು ಅಂದಾಗ ಮಾತ್ರ ಸಹಕಾರಿ ರಂಗ ಉಳಿದು, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರೆಯಲು ಸಾಧ್ಯ ಎಂದರು. ಸಹಕಾರಿಗಳ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಸದಸ್ಯತ್ವ ನೀಡಬೇಕು. ನೂರಕ್ಕೆ ನೂರು ಸದಸ್ಯತ್ವ ನೀಡದಿರುವ ಹಾಗೂ ಸರ್ಕಾರಿ ಸೌಲಭ್ಯಗಳನ್ನು ವಿತರಿಸದಿರುವ ಸಹಕಾರಿಗಳನ್ನು ಸರ್ಕಾರವೇ ಸೂಪರ್ ಸೀಡ್ ಮಾಡುವ ಕ್ರಮ ಯುರೋಪಿಯನ್ ರಾಷ್ಟ್ರಗಳಲ್ಲ್ಲಿದೆ. ಆ ಮಾದರಿಯ ಸಹಕಾರಿ ನಿಯಮಗಳು ರಾಜ್ಯದಲ್ಲಿಯೂ ಜಾರಿಗೊಳ್ಳಬೇಕು. ಅಂದಾಗ ಮಾತ್ರ ಸಹಕಾರಿಗಳು ರಾಜಕೀಯದಿಂದ ಮುಕ್ತವಾಗುತ್ತವೆ ಎನ್ನುವುದು ರಮೇಶ ಕತ್ತಿ ವಾದ.

ಬೆಳಗಾವಿ ಜಿಲ್ಲೆಯ 10 ಗ್ರಾಪಂಗಳಲ್ಲಿ ಹೊಸದಾಗಿ ಪಿಕೆಪಿಎಸ್ ಆರಂಭಿಸಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಕಾರ ಕ್ಷೇತ್ರದ ಮೇಲೆ ಜನರ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ ಹೊರತು, ಗ್ರಾಪಂನಲ್ಲಿ ಒಂದಕ್ಕಿಂತ ಹೆಚ್ಚು ಪಿಕೆಪಿಎಸ್ ಮುಚ್ಚಿಸುವುದಿಲ್ಲ.| ಎಂ.ಎನ್.ಮಣಿ, ಜಿಲ್ಲಾ ಉಪ ನಿಬಂಧಕ, ಸಹಕಾರಿ ಇಲಾಖೆ ಬೆಳಗಾವಿ

| ರವಿ ಗೋಸಾವಿ ಬೆಳಗಾವಿ