ತುಮಕೂರು: ಮರು ಪರಿಶೀಲನೆಗಾಗಿ ರಾಜಭವನದಿಂದ ವಾಪಸಾಗಿದ್ದ ವಿಧೇಯಕಗಳನ್ನು ಮರು ಪರಿಶೀಲಿಸಿ ರಾಜ್ಯಪಾಲರ ಅನುಮೋದನೆಗೆ ಮತ್ತೆ ಸಲ್ಲಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, ಕರ್ನಾಟಕ ಸೌಹಾರ್ದ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ ಸೇರಿದಂತೆ ವಿವಿಧ 11 ವಿಧೇಯಕಗಳ ಅನುಮೋದನೆಗಾಗಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಕಳುಹಿಸಿತ್ತು. ಈ ವಿಧೇಯಕಗಳ ಮರು ಪರಿಶೀಲನೆ ಅಗತ್ಯದ ಬಗ್ಗೆ ರಾಜ್ಯಪಾಲರು ವಾಪಸ್ಸು ಕಳುಹಿಸಿದ್ದರು. ಶೀಘ್ರವೇ ಮರು ಪರಿಶೀಲಿಸಿ ಪುನ@ ಅನುಮೋದನೆಗೆ ಸಲ್ಲಿಸಲಾಗುವುದು ಎಂದರು.
ವಿಧಾನಸಭೆಯಲ್ಲಿ ಅಂಗೀಕಾರವಾಗಿ ವಿಧಾನಪರಿಷತ್ತಿನಲ್ಲಿ ಈ ಮಸೂದೆಗಳನ್ನು ಮಂಡಿಸಲಾಗಿತ್ತು. ಅಲ್ಲದೆ, ಶಾಸಕರ ಅಭಿಪ್ರಾಯದಂತೆ ಸದನ ಸಮಿತಿಯನ್ನೂ ಮಾಡಿ ವಿಧೇಯಕಗಳನ್ನು ಅಂಗೀಕರಿಸಲಾಗಿತ್ತು. ಆದರೆ ಪ್ರತಿಪಕ್ಷಗಳು ಚರ್ಚೆಯಲ್ಲಿ ಭಾಗವಹಿಸದೆ ಸಭಾತ್ಯಾಗ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದ್ದಾರೆ. ಆದಾಗ್ಯೂ ಸರ್ಕಾರ ಈ ವಿಷಯದಲ್ಲಿ ಸಮರ್ಪಕವಾಗಿ ನಡೆದುಕೊಂಡಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.