ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ನಾಗ ಪ್ರಕೃತಿ ಅಧಿದೇವತೆ. ನಾಗಾರಾಧನೆಗೆ ಇಲ್ಲಿ ಬಹಳಷ್ಟು ಮಹತ್ವವಿದೆ. ಶ್ರದ್ಧೆಯಿಂದ ನಡೆಸುವ ಕೆಲಸಕ್ಕೆ ದೈವಾನುಗ್ರಹದ ಜತೆಗೆ ಪ್ರಕೃತಿ ಸಹಕಾರ ಅತ್ಯಗತ್ಯ ಎಂದು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಶ್ರೀಗಳ ಚಾತುರ್ಮಾಸ್ಯ ಮಹೋತ್ಸವದಲ್ಲಿ ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಶ್ರೀ ಸರಸ್ವತಿ ಪೂರ್ವ ಛಾತ್ರ ಸಂಘ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಸಂಯುಕ್ತವಾಗಿ ಪಡುಕುತ್ಯಾರಿನಲ್ಲಿ ಭಾನುವಾರ ಸಾಮೂಹಿಕ ಆಶ್ಲೇಷ ಬಲಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹಿಂದುಗಳು ಮೈಮರೆಯದೇ ಜಾಗೃತರಾಗಬೇಕು. ಭರತ ಭೂಮಿ ನಮ್ಮದು. ನಮ್ಮ ದೇಶದ ವಿಚಾರದಲ್ಲಿ ಜಾತಿ, ಸಮುದಾಯ ಮರೆತು ಸನಾತನ ಪರಂಪರೆ ಉಳಿಸಿ, ಬೆಳೆಸಲು ಕೈಜೋಡಿಸೋಣ. ಇನ್ನೊಬ್ಬರ ನಾಶಕ್ಕೆ ಯತ್ನಿಸುವ ಬದಲು ನಮ್ಮ ಸಂಸ್ಕೃತಿ, ಸಂಸ್ಕಾರ, ಧರ್ಮ, ಆಚಾರ ವಿಚಾರಗಳ ರಕ್ಷಣೆಗೆ ಮುಂದಾಗೋಣ. ಅದುವೇ ನಾವು ದೇಶದ ಪರಂಪರೆ ರಕ್ಷಣೆಗೆ ಕೊಡಬಹುದಾದ ಉತ್ತಮ ಕೊಡುಗೆ ಎಂದರು.
ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ನಾಗವೃಜ ಕ್ಷೇತ್ರ ಧರ್ಮದರ್ಶಿ ಡಾ.ಯಾಜಿ ನಿರಂಜನ ಭಟ್, ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಗುರುರಾಜ ಎಸ್.ಪೂಜಾರಿ, ಬೆಂಗಳೂರು ಎಂ.ಪವರ್ ಅಕಾಡೆಮಿ ನಿರ್ದೇಶಕ ಆಚಾರ್ಯ ಅರ್ಜುನ್ ಸೂರ್ಯ ಮಾತನಾಡಿದರು.
ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಮಹಾಸಂಸ್ಥಾನದ ಆಸ್ಥಾನ ವಿದ್ವಾಂಸ ಉಮೇಶ್ ಆಚಾರ್ಯ ಪಡೀಲು, ಗೌರವಾಧ್ಯಕ್ಷ ಪಿ.ವಿ.ಗಂಗಾಧರ ಆಚಾರ್ಯ, ಬಿ.ಸೂರ್ಯಕುಮಾರ್ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ, ವಿದ್ವಾನ್ ಕೇಶವ ಶರ್ಮ, ಗಜಾನನ ಆಚಾರ್ಯ ಭಟ್ಕಳ, ಮುರಹರಿ ಆಚಾರ್ಯ, ದಿನೇಶ್ ಆಚಾರ್ಯ ಪಡುಬಿದ್ರಿ, ಬಿ.ಎಂ.ಯದುನಂದನ ಆಚಾರ್ಯ, ಜಗದೀಶ್ ಆಚಾರ್ಯ, ದತ್ತ ಎನ್.ಆಚಾರ್ಯ ಉಪಸ್ಥಿತರಿದ್ದರು. ಲೋಕೇಶ್ ಎಂ.ಬಿ.ಆಚಾರ್, ಕಂಬಾರು ಸ್ವಾಗತಿಸಿ, ಕೆ.ಎಂ.ಗಂಗಾಧರ್ ಆಚಾರ್ಯ, ಗೀತಾಚಂದ್ರ ಕಾರ್ಕಳ ಹಾಗೂ ಮೌನೇಶ್ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು.
ಯಜ್ಞ ಯಾಗಾಧಿಗಳು ಕಂಟಕ ದೂರ ಮಾಡಿದರೆ, ಗುರುವಿನ ಅನುಗ್ರಹ ನಮ್ಮನ್ನು ಅನುಗ್ರಹಿಸಿ, ಆಧರಿಸುತ್ತದೆ. ಅಂಧಕಾರ, ಅಜ್ಞಾನ ಹೋಗಲಾಡಿಸಿ, ಸುಜ್ಞಾನದೊಂದಿಗೆ ಬೆಳಕಿನತ್ತ ಕರೆದೊಯ್ಯುವವನೇ ಗುರು. ಇಂತಹ ಗುರುಗಳು ಸಮಾಜಕ್ಕೆ ಮಾರ್ಗದರ್ಶಿಯಾಗಿ ದೊರಕಿರುವುದು ಸಮುದಾಯದ ಅದೃಷ್ಟ.-ಅನಂತ ಪದ್ಮನಾಭ ಆಸ್ರಣ್ಣ ಪ್ರಧಾನ ಅರ್ಚಕ, ಶ್ರೀ ಕ್ಷೇತ್ರ ಕಟೀಲು