ಜಿಲ್ಲೆ

ಗುಣಮಟ್ಟ ಹೆಚ್ಚಳಕ್ಕೆ ವೃತ್ತಿಪರ ಸಂಸ್ಥೆಗಳ ಸಹಕಾರ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಕ್ಷಮತೆ ಮತ್ತು ವಿಷಯದ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳ ಜತೆಗೆ ವೃತ್ತಿಪರ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ತತ್ವಶಾಸ್ತ್ರ ವಿಭಾಗ ಹಾಗೂ ಬೆಳಗಾವಿ ಹಿಂಡವಾಡಿಯ ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಆಂಡ್ ರಿಲಿಜನ್ (ಎಸಿಪಿಆರ್) ಸಂಸ್ಥೆ ನಡುವೆ ಸಂಶೋಧನೆ, ತರಬೇತಿ ಮತ್ತು ಶೈಕ್ಷಣಿಕ ವಿಸ್ತರಣಾ ಚಟುವಟಿಕೆ ಆಯೋಜಿಸಲು ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಂಡು ಅವರು ಮಾತನಾಡಿದರು.
ಪ್ರಸ್ತುತ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗದ ಮಾರುಕಟ್ಟೆಗೆ ಸಿದ್ಧಪಡಿಸುವಲ್ಲಿ ತರಬೇತಿ ಮತ್ತು ಕೌಶಲ ಮಹತ್ವ ಪಡೆದಿವೆ. ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯವು ಸ್ನಾತಕೋತ್ತರ ಮತ್ತು ಸ್ನಾತಕ ಪದವಿ ಮಟ್ಟದಲ್ಲಿ ವಿವಿಧ ವೃತ್ತಿಪರ ಸಂಸ್ಥೆಗಳ ಜತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ಸಂಶೋಧನೆ, ತರಬೇತಿ, ಸೇರಿ ಅನೇಕ ಶೈಕ್ಷಣಿಕ ವಿಸ್ತರಣಾ ಚಟುವಟಿಕೆ ಹಮ್ಮಿಕೊಳ್ಳಲು ಸಹಾಯಕವಾಗಲಿದೆ ಎಂದರು.
ಪ್ರೊ. ಕೆ.ವಿ.ಜುಕ್ತಿಮಠ ಮಾತನಾಡಿ, ಎರಡು ಸಂಸ್ಥೆಗಳ ಮಧ್ಯೆ ಜಂಟಿಯಾಗಿ ಸಂಶೋಧನೆಗೆ ಒತ್ತು ನೀಡುವುದು, ಪರಿಣಿತ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಜಂಟಿಯಾಗಿ ವಿಚಾರ ಸಂಕಿರಣ, ಸಮ್ಮೇಳನ, ಕಾರ್ಯಾಗಾರ ಆಯೋಜಿಸುವುದು ಮುಖ್ಯ ಎಂದರು.
ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ, ಕವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಸುರೇಶ ತುವಾರ, ಬೆಳಗಾವಿಯ ಹಿಂಡವಾಡಿಯ ಅಕಾಡೆಮಿ ಆಫ್ ಕಂಪ್ಯಾರಿಟಿವ್ ಫಿಲಾಸಫಿ ಆಂಡ್ ರಿಲಿಜನ್ (ಎಸಿಪಿಆರ್) ಸಂಸ್ಥೆ ಉಪಾಧ್ಯಕ್ಷ ಸುಬ್ರಮಣ್ಯ ಭಟ್, ಎಂ.ಬಿ.ಜಿರ್ಲಿ, ಡಾ. ಆರ್.ಸಿ.ಮಠದ, ಪ್ರೊ. ಬಿ.ಎಚ್. ಗುಜಲಾರ, ಪ್ರೊ. ಎಂ.ಪಿ. ರಮೇಶ, ಇತರರು ಇದ್ದರು.