ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 3ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಅನಿಲ್ ಕುಮಾರ್, ಎ.ರಾಜೇಶ್, ರಾಜು ವಿಶ್ವಕರ್ಮ, ಬಡಗಲಪುರ ವೆಂಕಟೇಶ್, ವಿಜಯ ರವಿಕುಮಾರ್, ಎ.ಈ.ರಘು ಇತರರು ಇದ್ದರು. 
ಜಿಲ್ಲೆ

ಸಮುದಾಯದ ಪ್ರಗತಿಗೆ ಅಧಿಕಾರಿಗಳ ಸಹಕಾರ ಅಗತ್ಯ

ಎಚ್.ಡಿ.ಕೋಟೆ: ಈ ದೇಶಕ್ಕೆ ಅಡಿಪಾಯ ಹಾಕಿದ ಸಮುದಾಯ ವಿಶ್ವಕರ್ಮ ಸಮುದಾಯ ಎಂದು ಶಾಸಕ ಅನಿಲ್ ಕುಮಾರ್ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮೂರನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮುದಾಯ ಹಿಂದಿನ ಕಾಲದಲ್ಲಿ ಎತ್ತಿನಗಾಡಿ ಮಾಡದೆ ಇದ್ದರೆ ಇಂದು ವಿಮಾನ ಕಾಣಲು ಸಾಧ್ಯ ಆಗುತ್ತಿರಲಿಲ್ಲ. ಇಂದು ನಾವೆಲ್ಲರೂ ಚಿನ್ನದ ಹಾರ ಹಾಕಲು ಈ ಸಮುದಾಯದ ಕುಶಲಕರ್ಮಿಗಳು ಕಾರಣ. ಯಾವುದೇ ಸಮುದಾಯ ಮುಂದೆ ಬರಬೇಕಾದರೆ ಆ ಸಮುದಾಯದ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಧ್ವನಿ ಇಲ್ಲದವರ ಪರವಾಗಿ ನಿಲ್ಲುವುದು ಶಾಸಕರ ಜವಾಬ್ದಾರಿ. ಆ ಕೆಲಸವನ್ನು ನನ್ನ ಅಧಿಕಾರಾವಧಿಯಲ್ಲಿ ಮಾಡಿಕೊಂಡು ಬಂದಿದ್ದೇನೆ. ಪಟ್ಟಣದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ವಿಶ್ವಕರ್ಮ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಈ ಸಮುದಾಯ ಭವನ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು ಎಂದರು.

ತಾಲೂಕಿನ 86 ಗ್ರಾಮಗಳಲ್ಲಿ 16ರಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತಿದ್ದೇವೆ. ಯುವ ಬ್ರಿಗೇಡ್ ಕಚೇರಿಗಾಗಿ ಸಿಎ ನಿವೇಶನ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಈಗಾಗಲೇ ನಿರ್ಮಾಣವಾಗುತ್ತಿರುವ ಬಡಾವಣೆಗಳಲ್ಲಿ ಬೇರೆಬೇರೆ ಸಮುದಾಯಕ್ಕೆ ನೀಡಲಾಗಿದೆ, ಉಳಿದ ಕಡೆ ನಿವೇಶನ ಕೊಡಿಸಲು ಪುರಸಭೆ ಆಡಳಿತಕ್ಕೆ ಸೂಚಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಬ್ರಿಗೇಡ್ ಅಧ್ಯಕ್ಷ ದಾಸಾಚಾರಿ, 2000-01ರಲ್ಲಿ ಛಿದ್ರವಾಗಿದ್ದ ನಮ್ಮ ಸಮುದಾಯವು ಹಿರಿಯರು ಸಹಕಾರದಿಂದ ಒಗ್ಗೂಡಿದೆ. ಯುವ ಬ್ರಿಗೇಡ್ ಈ ಮಟ್ಟದಲ್ಲಿ ಬೆಳೆಯಲು ಸಮುದಾಯ ಕಾರಣ. ನಮ್ಮ ಸಮುದಾಯ ಒಗ್ಗಟ್ಟಿನಿಂದ ಇರುವುದು ಹೆಮ್ಮೆಯ ವಿಚಾರ ಎಂದರು.

ವಿಶ್ವಕರ್ಮ ಸಮುದಾಯವು ತಾಲೂಕಿನಲ್ಲಿ ತೀರಾ ಹಿಂದುಳಿದಿದ್ದು, ಈ ನಿಟ್ಟಿನಲ್ಲಿ ವಿಶ್ವಕರ್ಮ ಯುವ ಬ್ರಿಗೇಡ್ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದೆ. ಆದ್ದರಿಂದ ಕಚೇರಿ ತೆರೆಯಲು ಸಿಎ ನಿವೇಶನ ನೀಡಬೇಕು. ರಾಜಕೀಯ ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಮೇಳ ನಡೆಸಿ ಉದ್ಯೋಗ ದೊರಕಿಸಿ ಕೊಡಬೇಕು. ಜೆಎಲ್‌ಆರ್‌ನಲ್ಲಿ ನಮ್ಮ ಸಮುದಾಯಕ್ಕೆ ಉದ್ಯೋಗ ಕೊಡಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲ ಎ.ರಾಜೇಶ್, ತಾಲೂಕು ವಿಶ್ವಕರ್ಮ ಸೇವಾ ಸಮಾಜದ ಅಧ್ಯಕ್ಷ ರಾಜು ವಿಶ್ವಕರ್ಮ, ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಬಡಗಲಪುರ ವೆಂಕಟೇಶ್, ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ವಿಜಯ ರವಿಕುಮಾರ್, ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಎ.ಈ.ರಘು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಕೌಶಲ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ಕೆ.ನಾರಾಯಣಮೂರ್ತಿ, ಭಾಮೀಸ್ ಗ್ರೂಫ್ ಕಂಪನಿ ಅಧ್ಯಕ್ಷ ಡಾ.ರಾಘವೇಂದ್ರ ಪ್ರಸಾದ್, ಕಬಿನಿ ಎಇಇ ಗಣೇಶ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್, ಪಬ್ಲಿಕ್ ವಾಯ್ಸ ಮುಖ್ಯಸ್ಥ ರಾಜು ಕಾರ್ಯ, ಯುವ ಬ್ರಿಗೇಡ್ ಪದಾಧಿಕಾರಿಗಳಾದ ನಿಂಗರಾಜು ಬಿ.ಆಚಾರ್, ವಸಂತ್ ಕುಮಾರ್, ಕಿರಣ್, ಲೋಕೇಶ್, ಸಿದ್ದಪ್ಪಾಜಿ, ರಾಜಚಾರಿ, ಪ್ರದೀಪ್ ಕುಮಾರ್, ರವಿ ಕುಮಾರ್, ಗೋವಿಂದರಾಜ, ವಿನಯ್ ಕುಮಾರ್, ನಾಗೇಶ್, ಶೇಖರ್, ನಾಗೇಂದ್ರ, ವಿನೋದ್ ಕುಮಾರ್, ಜನಾರ್ಧನ್, ಚಂದನ್, ವೆಂಕಟೇಶ್ ಇತರರು ಇದ್ದರು.