ಮದ್ದೂರು : ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಂಘದ ನೂತನ ಕಟ್ಟಡವನ್ನು ನಿರ್ಮಿಸಿ ಷೇರುದಾರರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಮುಂದಾಗಿರುವುದಾಗಿ ಸಂಘದ ಅಧ್ಯಕ್ಷ ಪಿ.ರಾಘವ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಭಾನುವಾರ ಕಸಬಾ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೂತನ ಸಹಕಾರ ಸಂಘದ ಕಟ್ಟಡವನ್ನು ನಿರ್ಮಿಸಲು 81 ಲಕ್ಷ ರೂ.ಗಳ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಷೇರುದಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ಮತ್ತಷ್ಟು ಆಧುನಿಕ ಸ್ಪರ್ಶ ನೀಡಲು ಸಂಸ್ಥೆಯು ಮುಂದಾಗಿದ್ದು ಈಗಾಗಲೇ 1800 ಷೇರುದಾರರನ್ನು ಹೊಂದಿದ್ದು 3.64 ಕೋಟಿ ರೂ. ಸಾಲ ವಿತರಣೆ ಮಾಡಿರುವುದಾಗಿ ಹೇಳಿದರು.
ಸುಮಾರು 70 ಲಕ್ಷ ರೂ. ಠೇವಣಿಯಿಟ್ಟಿದ್ದು ಸಾಲ ಪಡೆದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ಸುಮಾರು 5 ಲಕ್ಷ ರೂ. ಲಾಭ ಗಳಿಕೆಯತ್ತ ಮುಖ ಮಾಡಿದ್ದು, ಷೇರುದಾರರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಪಿ.ಎಂ. ಜನ ಔಷಧಿ ಕೇಂದ್ರ ತೆರೆಯಲು ಜತೆಗೆ ಷೇರುದಾರರ ಅನುಕೂಲಕ್ಕಾಗಿ ಉಳಿತಾಯ ಖಾತೆಯನ್ನು ತೆರೆಯಲು ಕ್ರಮ ವಹಿಸಿರುವುದಾಗಿ ವಿವರಿಸಿದರು.
ಆಡಳಿತ ಮಂಡಳಿ ಸಂಘದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಿದ್ದು, ರೈತರ ಅನುಕೂಲಕ್ಕಾಗಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಕೆ ಮಾಡುವುದರ ಮೂಲಕ ಸಂಘವು ರೈತರ ಆರ್ಥಿಕಾಭಿವೃದ್ಧಿಗೂ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ಹೇಳಿದರು.
ಅಭಿನಂದನೆ:
ಷೇರುದಾರರ ಮಕ್ಕಳು ಕಳೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಲಾಯಿತು. ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗೀಗೌಡ, ನಿರ್ದೇಶಕ ಪಿ.ಸಂದರ್ಶ, ಸಹಕಾರ ಸಂಘದ ಉಪಾಧ್ಯಕ್ಷೆ ಎಂ.ವಿ.ಶಶಿಕಲಾ, ನಿರ್ದೇಶಕರಾದ ಜಿ.ಎಸ್.ಶಿವಪ್ಪ, ಜಿ.ಸಿ.ಮಹೇಶ್, ಎಂ.ಸಿ.ರೇಣುಕುಮಾರ್, ಚನ್ನಸಂದ್ರ ಲಕ್ಷ್ಮಣ್, ಸಿ.ಸಿದ್ದೇಗೌಡ, ಜಿ.ಸಿ.ನಿರ್ಮಲಾ, ಕೆ.ರೇಖಾ, ನಿಂಗಮ್ಮ, ಅರವಿಂದ, ಪ್ರಭಾರ ಸಿ.ಇ.ಓ ಕೆ.ಡಿ.ರಾಜೇಶ್ ಹಾಜರಿದ್ದರು.
22ಎಂಡಿಆರ್1