ಆಲೂರುಸಿದ್ದಾಪುರ ಶಾಲಾ ವಜ್ರಮಹೋತ್ಸವ ಆಚರಣೆ ಸಂಬಂಧ ಆಯೋಜಿಸಿದ್ದ ಐದನೇ ಪೂರ್ವಭಾವಿ ಸಭೆಯಲ್ಲಿ ಸಮಿತಿ ಕಾರ್ಯದರ್ಶಿ ಕರುಂಬಯ್ಯ ಮಾತನಾಡಿದರು. ಸಮಿತಿ ಅಧ್ಯಕ್ಷ ಸತೀಶ್‌ಕುಮಾರ್, ಹಿರಿಯ ವಿದಗ್ಯಾರ್ಥಿಗಳಾದ ಮಾಚಯ್ಯ, ಪ್ರೇಮಾನಾಥ್, ಪ್ರಕಾಶ್ ವೀಣಾ, ಗಣಪತಿ ಇದ್ದರು. 
ಜಿಲ್ಲೆ

ಹಣ ಕ್ರೋಡೀಕರಣಕ್ಕೆ ಸಹಕಾರ ಅಗತ್ಯ

ಲೋಕೇಶ್ ಮನು. ಡಿ

ಶನಿವಾರಸಂತೆ: ಆಲೂರುಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಆಚರಿಸಲಿರುವ ಶಾಲಾ ವಜ್ರ ಮಹೋತ್ಸವ ಕಾರ್ಯಕ್ರಮದ ಐದನೇ ಪೂರ್ವಭಾವಿ ಸಭೆಯನ್ನು ಮಂಗಳವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಎಸ್.ಸತೀಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕಾರ್ಯದರ್ಶಿ ಎಚ್.ಪಿ.ಕರುಂಬಯ್ಯ ಮಾತನಾಡಿ, ಈಗಾಗಲೇ ಆಯೋಜಿಸಿದ್ದ ಪೂರ್ವಭಾವಿ ಸಭೆಗಳಲ್ಲಿ ಶಾಲಾ ವಜ್ರಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಗಿದೆ. ವಜ್ರ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು 20 ಲಕ್ಷ ರೂ. ವೆಚ್ಚ ಆಗಲಿರುವ ಕುರಿತು ಅಂದಾಜು ಕ್ರಿಯಾಯೋಜನೆ ರೂಪಿಸಲಾಗಿದೆ. ಈ ನಿಟ್ಟಿನಲ್ಲಿ ಹಣದ ಕ್ರೋಡೀಕರಣ ಅಗತ್ಯ ಇರುವುದರಿಂದ ವಜ್ರ ಮಹೋತ್ಸವ ಸಮಿತಿ, ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳಿಂದ ಸಹಕಾರ ಕೋರಬೇಕಿದೆ ಎಂದು ಮನವಿ ಮಾಡಿದರು.

ಪೂರ್ವಭಾವಿ ಸಭೆಯಲ್ಲಿ ವಜ್ರಮಹೋತ್ಸವ ಕಾರ್ಯಕ್ರಮ ನವಂಬರ್ ತಿಂಗಳ ಕೊನೆಯಲ್ಲಿ ಆಚರಿಸಲಿರುವುದರಿಂದ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಆರ್ಥಿಕ ಕ್ರೋಡೀಕರಣದ ಪ್ರಕ್ರಿಯೆ ಮುಕ್ತಾಯಗೊಳಿಸುವ ಬಗ್ಗೆ, ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಪಾಠ ಮಾಡಿದ ಗುರುಗಳಿಗೆ ಗುರುವಂದನೆ, ಮಾಜಿ ಸೈನಿಕರು, ಸಾಧಕರಿಗೆ ಸನ್ಮಾನದ ಜತೆಯಲ್ಲಿ ಸಮಾಜ ಸೇವಕರು, ಹಿರಿಯ ವಿದ್ಯಾರ್ಥಿಗಳಾಗಿದ್ದು ಈಗ ಪ್ರಗತಿಪರ ರೈತರಾಗಿರುವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವಂತೆ ನಿರ್ಣಯಿಸಲಾಯಿತು.

ವಜ್ರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಶಾಲಾ ಕೊಠಡಿಗಳನ್ನು ದುರಸ್ತಿ ಪಡಿಸುವ ಅಗತ್ಯ ಇರುವುದರಿಂದ ಈ ಕುರಿತು ಶಾಸಕರಿಗೆ ಮನವಿ ಮಾಡಲಾಗಿದ್ದು, ಶಾಸಕರು ಆರ್ಥಿಕ ನೆರವಿನ ಭರವಸೆ ನೀಡಿರುವ ಬಗ್ಗೆ ಸಮಿತಿ ಸದಸ್ಯರು ಸಭೆಗೆ ತಿಳಿಸಿದರು. ಮುಂದಿನ ಪೂರ್ವಭಾವಿ ಸಭೆ ಆ.29 ರಂದು ನಡೆಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪೂರ್ವಭಾವಿ ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳಾದ ಕಡ್ಯದ ಮಾಚಯ್ಯ, ಹೊಸಕ್ಲು ಕೃಷ್ಣಪ್ಪ, ಎಚ್.ಎಸ್.ಪ್ರೇಮ್‌ನಾಥ್, ಗಣಪತಿ, ಎಸ್‌ಡಿಎಂಸಿ ಅಧ್ಯಕ್ಷ ಹೇಮಾನಂದ್, ಬೈಮನ ಪ್ರಕಾಶ್ ವೀಣಾ, ಶಾಲಾ ಮುಖ್ಯಶಿಕ್ಷಕ ಉದಯ್‌ಕುಮಾರ್, ನಿವೃತ್ತ ಅಭಿಯಂತರ ಮತ್ತು ದಾನಿ ಸೋಮೇಶ್ ಮುಂತಾದವರು ಇದ್ದರು.