ಮೈಸೂರು: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರನಾಥ ಸ್ವಾಮೀಜಿ ತಿಳಿಸಿದರು.
ಕೆಂಪೇಗೌಡ ಜಯಂತಿ ಆಚರಣೆ ಸಂಬಂಧ ಹೆಬ್ಬಾಳಿನಲ್ಲಿರುವ ಶಾಖಾ ಮಠದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿ ಬಾರಿಯೂ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ಆದರೆ, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಆಗಮಿಸಿದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಬಡಾವಣೆ, ತಾಲೂಕಿನ ಗ್ರಾಮೀಣ ಭಾಗದಿಂದಲೂ ಜನರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಕೋರಿದರು.
ಜೂ.27ರಂದು ಅರ್ಥಪೂರ್ಣವಾಗಿ ಕೆಂಪೇಗೌಡರ ಜಯಂತಿ ಆಚರಿಸಲು ಎಲ್ಲರೂ ಒಮ್ಮತದಿಂದ ನಿರ್ಧರಿಸಲಾಗಿದೆ. ಈ ಬಾರಿ ಪ್ರಥಮವಾಗಿ ಲಲಿತಮಹಲ್‌ನಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಸಾಂಕೇತಿಕವಾಗಿ ಕೋಟೆ ಆಂಜನೇಯ ಸ್ವಾಮಿ ದೇವಾಲಯದವರೆಗೆ ಮೆರವಣಿಗೆ ಬರಲಿದೆ. ಬಳಿಕ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ನೀಡಿ ಕಲಾಮಂದಿರದವರೆಗೆ ಮೆರವಣಿಗೆ ಬರಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಕೆಂಪೇಗೌಡ ಜಯಂತಿ ಅದ್ದೂರಿ ಆಚರಣೆಗೆ ಅಗತ್ಯ ಸಹಕಾರ ನೀಡಲು ಸಿದ್ಧನಿದ್ದೇನೆ. ಸಮುದಾಯದ ವಿಚಾರ ಬಂದಾಗ ನಾನಾಗಲಿ, ಮಾಜಿ ಶಾಸಕರಾದ ನಾಗೇಂದ್ರ ಅವರಾಗಲಿ ಸಮುದಾಯದ ಪರವಾಗಿದ್ದೇವೆ. ಸಮುದಾಯ ಯಾವುದೇ ಇರಲಿ ಆ ಸಮುದಾಯ ಸಂಘಟನೆ ಪ್ರದರ್ಶನ ಮಾಡದಿದ್ದರೆ ಹಿಂದುಳಿಯಲಿದೆ. ಹಾಗಾಗಿ ನಮ್ಮ ಸಮುದಾಯದ ಶಕ್ತಿ ತೋರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಪ್ರೇರೇಪಿಸಿ ಎಂದು ಹೇಳಿದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪಕ್ಷಾತೀತವಾಗಿ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಎಲ್ಲರ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಒಕ್ಕಲಿಗರ ಸಂಘ ವಿವಿಧ ಸಂಘಗಳನ್ನು ಜತೆಗೂಡಿಸಿಕೊಂಡು ಎಲ್ಲರನ್ನೂ ಆಹ್ವಾನಿಸುವ ಕೆಲಸ ಮಾಡಲಿ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕೆಂಪೇಗೌಡ ಜಯಂತಿ ಯಶಸ್ವಿಗೊಳಿಸುವಂತೆ ಹೇಳಿದರು.
ಸಮಿತಿ ಅಧ್ಯಕ್ಷರಾಗಿ ನೇಮಕ:
ಇದೇ ಸಂದರ್ಭದಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಆಚರಣ ಸಮಿತಿ ಅಧ್ಯಕ್ಷರನ್ನಾಗಿ ಸಂಘದ ನಿರ್ದೇಶಕ ಪಿ.ಪ್ರಶಾಂತ್‌ಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಮಾಜಿ ಮೇಯರ್‌ಗಳಾದ ಮೋದಮಣಿ, ಪುಷ್ಪಲತಾ ಜಗನ್ನಾಥ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ಜಿ.ಗಂಗಾಧರ್‌ಗೌಡ, ಕೆ.ವಿ.ಶ್ರೀಧರ್, ಎಂ.ಬಿ.ಮಂಜೇಗೌಡ, ಮೈಸೂರು-ಚಾಮರಾಜನಗರ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಮರಿಸ್ವಾಮಿ, ಗೌರವಾಧ್ಯಕ್ಷ ಅಲತೂರು ಜಯರಾಮ್, ಪ್ರಧಾನ ಕಾರ್ಯದರ್ಶಿ ಎಂ.ಇ.ಚೇತನ್, ಖಚಾಂಚಿ ಆರ್.ಲೋಕೇಶ್, ನಿರ್ದೇಶಕರಾದ ನಾಗಣ್ಣ, ಎನ್.ಪ್ರಕಾಶ್, ಎನ್.ಉಮೇಶ್, ಬೋರೇಗೌಡ, ಎ.ರವಿ, ಗುರುರಾಜ್, ಕುಮಾರಗೌಡ, ಸುಶೀಲಾ ನಂಜಪ್ಪ, ಗಿರೀಶ್‌ಗೌಡ, ಒಕ್ಕಲಿಗ ಸಂಘ ಪೂರ್ವ ವಲಯದ ಅಧ್ಯಕ್ಷ ಸುರೇಶ್‌ಗೌಡ , ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಬಿಜೆಪಿ ಮುಖಂಡರಾದ ಸುಶ್ರುತ್‌ಗೌಡ, ಕವೀಶ್‌ಗೌಡ ವಾಸು, ಜೆಡಿಎಸ್ ಮುಖಂಡ ಎಚ್.ಕೆ.ರಾಮು, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್.ಲೋಕೇಶ್, ಕರ್ನಾಟಕ ಕಾವಲುಪಡೆ ರಾಜ್ಯಾಧ್ಯಕ್ಷ ಮೋಹನ್‌ಕುಮಾರ್‌ಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಎಸ್ ಬಿ.ಎಂ.ಮಂಜು, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ಜಿಪಂ ಮಾಜಿ ಸದಸ್ಯ ಮಾದೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮಿದೇವಿ, ನಮ್ಮೂರು ನಮ್ಮೋರು ಟ್ರಸ್ಟ್ ಅಧ್ಯಕ್ಷ ಬೀಡನಹಳ್ಳಿ ಸತೀಶ್‌ಗೌಡ, ಮೈಸೂರು ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಯೋಗೇಶ್, ರಾಜಕುಮಾರ್, ನೇಗಿಲಯೋಗಿ ರವಿಕುಮಾರ್, ಶಂಕಿಗೌಡ, ಮೈಸೂರಿನ ವಿವಿಧ ಒಕ್ಕಲಿಗ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಮೈಸೂರಿನ ಮಹಿಳಾ ಒಕ್ಕಲಿಗ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಮುಖಂಡರು ಇದ್ದರು.