ಕೋಟ: ಯಶಸ್ವಿ ಕಲಾವೃಂದ ಇಪ್ಪತ್ತೈದು ವರ್ಷಗಳಿಂದ ಕಲೆ ಉಳಿವಿಗಾಗಿ ಶ್ರಮಿಸಿ, ಈ ವಸಂತದಲ್ಲಿ 100 ಕಾರ್ಯಕ್ರಮ ಈಗಾಗಲೇ ನಿರ್ವಹಿಸಿರುವುದು ಸಣ್ಣ ವಿಷಯವಲ್ಲ. ಈ ತಂಡಕ್ಕೆ ಇನ್ನಷ್ಟು ಸಹಕಾರ ಸರ್ಕಾರದಿಂದ ದೊರೆತು ಶಕ್ತಿ ವೃದ್ಧಿಸಲಿ ಎಂದು ಗುತ್ತಿಗೆದಾರ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಂಯೋಜನೆಯಲ್ಲಿ ಬೆಳಕಿನ ಹಾಗೂ ಮಂದ ಬೆಳಕಿನ ಯಕ್ಷಗಾನ ಮತ್ತು ವಿಶ್ರಾಂತ ಕಲಾವಿದರಿಂದ ಗಾನ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಡಾ.ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣಿಪಾಲದ ಮಾಹೆಯ ಡಾ.ಜಗದೀಶ್ ಶೆಟ್ಟಿ, ಉಡುಪಿ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿದರು. ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.