ಮುದ್ದಟ್ಟನೂರು ಕ್ಯಾಂಪ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಪುರ ಕದಳಿವನದ ಚಿದಾನಂದ ತಾತ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಪ್ರಮುಖರಾದ ಚೊಕ್ಕ ಬಸವನಗೌಡ, ಟಿ.ಸೂರಿ ಬಾಬು, ಟಿ. ಎಂ. ಚಂದ್ರಶೇಖರಯ್ಯ ಇತರರಿದ್ದರು. 
ಜಿಲ್ಲೆ

ಸಹಕಾರ ಸಂಘಗಳು ಬೆಳೆಯಲು ಕೈಜೋಡಿಸಿ

ನರೇಶ್ ಕುಮಾರ್

ಸಿರಿಗೇರಿ: ರೈತರಿಗೆ ಸಹಾಯ ಮಾಡುವುದೇ ಸಹಕಾರ ಸಂಘಗಳ ಧ್ಯೇಯ ಎಂದು ಸಿದ್ದರಾಮಪುರ ಕದಳಿವನದ ಚಿದಾನಂದ ತಾತ ಹೇಳಿದರು.

ಸಮೀಪದ ಮುದ್ದಟ್ಟನೂರು ಕ್ಯಾಂಪ್‌ನಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಹಾಗೂ ಗೋದಾಮು ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಾಲ ಪಡೆದ ರೈತರು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದರಿಂದ ಸಹಕಾರ ಸಂಘಗಳು ಬೆಳೆಯಲು ಬಹುಮುಖ್ಯ ಕಾರಣವಾಗಿದೆ. ಪ್ರತಿಯೊಬ್ಬರೂ ಕೈಜೋಡಿಸಿದಾಗ ಸಹಕಾರ ಸಂಘಗಳು ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಆಶೀರ್ವಚನ ನೀಡಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಮಾತನಾಡಿ, ನಿಷ್ಠುರ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಯಾವುದೇ ಕಾರಣಕ್ಕೂ ಸಂಘಗಳಲ್ಲಿ ರಾಜಕೀಯ ಬೆರೆಸಬಾರದು. ಚುನಾವಣೆ ನಡೆಸದೆ ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿ ಸಹಕಾರ ಸಂಘಗಳನ್ನು ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ನಬಾರ್ಡ್ ಸಂಸ್ಥೆ ಇರುವುದರಿಂದ ರೈತರಿಗೆ ಹೆಚ್ಚಿನ ಸಾಲ ದೊರಕತ್ತಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಕೊಡುವ ಸಾಲದ ಮೊತ್ತ ಕಡಿಮೆ ಮಾಡಿದ್ದು ಸರಿಯಲ್ಲ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಚೊಕ್ಕ ಬಸವನಗೌಡ, ಸಹಕಾರ ಸಂಘದ ಅಧ್ಯಕ್ಷ ಟಿ.ಸೂರಿ ಬಾಬು ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ ರಾವ್, ತೆಕ್ಕಲಕೋಟೆ ಕ್ಷೇತ್ರ ಅಧಿಕಾರಿ ಎಲ್.ಬಾಲಪ್ಪ, ಪ್ರಮುಖರಾದ ಕೆ.ಎಸ್. ಮಂಗಳೇಶ, ಕೆ. ಪರಶುರಾಮ, ಕೆಒಎಫ್ ರಾಜ್ಯ ಉಪಾಧ್ಯಕ್ಷ ಸುಗನಗೌಡ,  ವಿ.ಲಕ್ಕಮ್ಮ, ಕೆ. ಶಾಂತಮ್ಮ, ಬಿ.ಮಂಜುನಾಥ, ಶಿವರಾಜ್, ಹನುಮಂತ ಆಚಾರಿ ಇತರರಿದ್ದರು.